ಹೊಸಪೇಟೆ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಬೃಹತ್ ಪ್ರತಿಭಟನೆ; ಸಾವಿರಾರು ಮಂದಿ ಭಾಗಿ

ವಿಜಯನಗರ: ಕೇಂದ್ರ ಸರಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಂಜುಮನ್ ಖಿದ್ಮತೇ ಇಸ್ಲಾಂ ಕಮಿಟಿಯ ನೇತೃತ್ವದಲ್ಲಿ ಹೊಸಪೇಟೆಯಲ್ಲಿಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಸಾವಿರಾರು ಮಂದಿ ಪ್ರತಿಭಟನಾಕಾರರು ನಗರದ ಈದ್ಗಾ ಮೈದಾನದಿಂದ ಮೆರವಣಿಗೆ ಆರಂಭಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ಮುಂದೆ ರಸ್ತೆ ತಡೆದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ವಕ್ಫ್ ತಿದ್ದುಪಡಿ ಮಸೂದೆ ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಇದರ ಹಿಂದೆ ಅಲ್ಪಸಂಖ್ಯಾತರನ್ನು ದಮನಿಸುವ, ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಭಾರತೀಯ ಸಮಾಜವನ್ನು ವಿಭಜಿಸುವ ಗುರಿ ಹೊಂದಿರುವ ಈ ಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂವಿಧಾನದ ವಿರುದ್ಧವಾಗಿರುವ ಕಾಯ್ದೆಯನ್ನು ಬಲವಾಗಿ ಖಂಡಿಸುತ್ತೇವೆ. ಈ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಯಾಗದಂತೆ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರ ತಾಲೂಕ ದಂಡಾಧಿಕಾರಿಗಳ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹೊಸಪೇಟೆ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್. ಎಫ್.ಇಮಾಮ್ ನಿಯಾಝಿ, ಎಚ್.ಜಿ.ಗುರುದತ್, ಡಾ.ಮೈನುದ್ದೀನ್ ದುರ್ವೇಶ್, ಅಸ್ಲಂ ಮಳಗಿ, ಟಿಂಕರ್ ರಫೀಕ್, ಬಡಾವಲಿ, ಫಿರೋಝ್ ಖಾನ್, ಸದ್ದಾಮ್ ಹುಸೇನ್, ಸಯ್ಯದ್ ಖಾದರ್ ರಫ್ಫಾಯಿ,ಶಬ್ಬೀರ್, ಮೆಹಬೂಬ್, ಖಾಜಾ ಮಮುಹಮ್ಮದ್ ನಿಯಾಝ್, ಮನ್ಸೂರ್, ಇತರ ಸಂಘಟನೆಗಳ ಪ್ರಮುಖರಾದ ರಾಮಚಂದ್ರಪ್ಪ, ಭಾಸ್ಕರ್ ರೆಡ್ಡಿ, ಜಂಬಯ್ಯ ನಾಯಕ, ಕರುಣಾನಿಧಿ ಮತ್ತಿತರರು ಭಾಗವಹಿಸಿದ್ದರು.