ಬಿಜೆಪಿಯಲ್ಲಿ ಹಿಂದುತ್ವ ಸಿದ್ದಾಂತ ದೂರ ಹೋಗಿದೆ: ಕೆ.ಎಸ್. ಈಶ್ವರಪ್ಪ
ಬೆಂಗಳೂರು: ದೊಡ್ಡವರ ಮಾತು ಕೇಳುವ ಅಭ್ಯಾಸ ನನಗೆ ಈಗಿಲ್ಲ. ಹೀಗಾಗಿ, ಫೆ.4ರಂದು ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ ಎಂದು ಬಿಜೆಪಿ ಮಾಜಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮಂಗಳವಾರ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಫೆ.4ರಂದು ಬ್ರಿಗೇಡ್ ಉದ್ಘಾಟನೆಗೊಳ್ಳಲಿದ್ದು, ಸಾವಿರಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದುಳಿದವರು ಮತ್ತು ದಲಿತರಿಗೆ ಬೆಂಬಲ ಸಮಾಜದಿಂದಲೂ, ಸರಕಾರದಿಂದಲೂ ಸಿಗುತ್ತಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅಲ್ಲಿ ಕ್ರಾಂತಿವೀರ ಬ್ರಿಗೇಡ್ ನಿಲ್ಲಲಿದೆ ಎಂದರು.
ಬಸವರಾಜ ಬಾಳೇಕಾಯಿ ಬ್ರಿಗೇಡ್ ಅಧ್ಯಕ್ಷರಾಗಿ, ಕಾಂತೇಶ್ ಕಾರ್ಯಾಧ್ಯಕ್ಷರಾಗಿದ್ದಾರೆ. ಗೂಳಿಹಟ್ಟಿ ಶೇಖರ್, ಮುಕುಡಪ್ಪ ಅವರು ಸಂಚಾಲಕರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಈ ಹಿಂದೆ ದೊಡ್ಡವರ ಮಾತು ಕೇಳುವ ಅಭ್ಯಾಸ ನನಗೆ ಇತ್ತು. ಆದರೆ, ಇಂದು ಇಲ್ಲ. ಅಂದು ದೊಡ್ಡವರ ಮಾತು ಕೇಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದ್ದೆ. ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ. ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ. ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಎನ್ನುವ ಪ್ರಶ್ನೆಯೂ ಇಲ್ಲ ಎಂದು ನುಡಿದರು.
ಬಿಜೆಪಿಯಲ್ಲಿ ಹಿಂದುತ್ವ ಸಿದ್ದಾಂತ ದೂರ ಹೋಗಿದೆ. ಹೊಂದಾಣಿಕೆ ರಾಜಕೀಯ ಹೆಚ್ಚಾಗಿದೆ. ಹೊಂದಾಣಿಕೆ ರಾಜಕೀಯ ಶುದ್ದೀಕರಣ ಆಗಲಿ ಎಂಬ ಆಸೆ ನನ್ನದು. ಅನೇಕ ಮುಖಂಡರ ಆಸೆ ಕೂಡ ಇದೇ ಆಗಿದೆ. ಬಿಜೆಪಿ ಶುದ್ದೀಕರಣ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದ ಅವರು, ಶಿಕಾರಿಪುರದಲ್ಲಿ ವಿಜಯೇಂದ್ರ ಅವರ ಗೆಲುವು ನಮ್ಮ ಭಿಕ್ಷೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ನಾನು ವರುಣಾದಲ್ಲಿ ನಿಂತಿದ್ದರೆ ಸಿದ್ದರಾಮಯ್ಯ ಕತೆ ಏನಾಗುತ್ತಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ. ಅಂದರೆ ನಾನೇ ಗೆಲ್ಲಿಸಿದೆ ಎನ್ನುವ ಅರ್ಥ ಅಲ್ಲವೇ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಸಚಿನ್ ಪಾಂಚಾಳ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ಈಶ್ವರಪ್ಪ, ಕಾಂಗ್ರೆಸ್‍ಗೆ ನೈತಿಕತೆ ಇಲ್ಲ. ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದುಕೊಳ್ಳಿ. ನಿರ್ದೋಷಿಯಾಗಿ ಹೊರ ಬಂದರೆ ಒಂದು ನಿಮಿಷವೂ ಕಾಯದೇ ವಾಪಸ್ಸು ಮಂತ್ರಿ ಮಾಡಲಿ ಎಂದು ಸವಾಲು ಹಾಕಿದರು.