ಅಂತಿಮ ಮತದಾರರ ಪಟ್ಟಿ ಪ್ರಕಟ: ರಾಜ್ಯದಲ್ಲಿ ಒಟ್ಟು 5.5 ಕೋಟಿ ಮತದಾರರು
ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವ ರಾಜ್ಯದಲ್ಲಿ ಒಟ್ಟು 5,52,08,565 ಸಾಮಾನ್ಯ ಮತದಾರರಿದ್ದಾರೆ. ಇದರಲ್ಲಿ 2,75,62,634 ಪುರುಷ ಮತದಾರರು, 2,76,40,836 ಮಹಿಳಾ ಮತದಾರರು ಮತ್ತು 5,095 ಇತರ ಮತದಾರರು ಸೇರಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸೋಮಾವಾರದಂದು ಎಲ್ಲ ಜಿಲ್ಲೆಗಳ ಉಪ ಆಯುಕ್ತರು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ಪಟ್ಟಿ ನೋಂದಣಿ ಅಧಿಕಾರಿಗಳು ಮತ್ತು ಎಲ್ಲಾ ಮತಗಟ್ಟೆಗಳಲ್ಲೂ ಪ್ರಕಟಿಸಲಾಗಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ https://ceo.karnataka.gov.in/en ಮತ್ತು DEOಗಳ ವೆಬ್‍ಸೈಟ್‍ಗಳಲ್ಲಿ ಸಹ ವಿಧಾನಸಭೆ ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಲಭ್ಯವಿದೆ. ಸಾರ್ವಜನಿಕರು ತಮ್ಮ ಹೆಸರುಗಳನ್ನು ಸರಿಯಾದ ಮಾಹಿತಿಯೊಂದಿಗೆ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಕರಡು ಪಟ್ಟಿಗೆ ಹೋಲಿಸಿದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 1,03,783 ಮತದಾರರು ಹೆಚ್ಚಳ ಆಗಿದ್ದಾರೆ. ಮಹಿಳಾ ಮತದಾರರು 72,754, ಪುರುಷ ಮತದಾರರು 30,999 ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿ-2025ರ ಪ್ರಕಾರ ಮತಗಟ್ಟೆಗಳ ಸಂಖ್ಯೆ 58,932 ಇದೆ.
ಯುವ ಮತದಾರರ ಸಂಖ್ಯೆ ಕರಡು ಪಟ್ಟಿಗಳ 6,81,197 ರಿಂದ ಅಂತಿಮ ಪಟ್ಟಿಗಳಲ್ಲಿ 8,02,423ಕ್ಕೆ ಏರಿಕೆಯಾಗಿದೆ, ಇದು 1,21,226 ಯುವ ಮತದಾರರ ಗಮನಾರ್ಹ ಏರಿಕೆಯನ್ನು ಸೂಚಿಸುತ್ತದೆ. ರಾಜ್ಯದಲ್ಲಿ 2025ರ ಸಾಲಿನಲ್ಲಿ ಕರಡು ಮತದಾರರ ಪಟ್ಟಿಗಳಲ್ಲಿ ಇದ್ದ 3,453 ಸಾಗರೋತ್ತರ ಮತದಾರರ ಸಂಖ್ಯೆ ಅಂತಿಮ ಪಟ್ಟಿಯ ಪ್ರಕಾರ 3,483ಕ್ಕೆ ಏರಿಕೆಯಾಗಿದೆ.
ಅಂತಿಮ ಪಟ್ಟಿ 2025ರ ಪ್ರಕಾರ 85 ವಯಸ್ಸಿನ ಅಂತಿಮ ಮತದಾರರ ಸಂಖ್ಯೆ 6,36,551 ಮತ್ತು ಕರಡು ಪಟ್ಟಿಯಲ್ಲಿ 6,38,857ರಷ್ಟಿತ್ತು, ಇಳಿಮುಖವಾಗಿರುವುದನ್ನು ಗಮನಿಸಬಹುದಾಗಿದೆ. 100 ವರ್ಷ ಪೂರೈಸಿದ ಮತದಾರರ ಸಂಖ್ಯೆ 22,551ಕ್ಕೆ ಇಳಿಕೆಯಾಗಿದೆ.
ದಿವ್ಯಾಂಗ ಮತದಾರರು: ಅಂತಿಮ ಪಟ್ಟಿಯಲ್ಲಿ ದಿವ್ಯಾಂಗ ಮತದಾರರ ಸಂಖ್ಯೆ 6,28,554 ಇದೆ. ಕರಡು ಪಟ್ಟಿ 2025ರಲ್ಲಿ 6,26,449 ಮತದಾರರಿದ್ದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಒಟ್ಟು 7,67,416 ಹೊಂದಿದ್ದು, ಶೃಂಗೇರಿ ವಿಧಾನಸಭಾ ಕ್ಷೇತ್ರವು ಕಡಿಮೆ ಸಂಖ್ಯೆಯ 1,68,882 ಮತದಾರರನ್ನು ಹೊಂದಿದೆ. ಇನ್ನು ರಾಜ್ಯದಲ್ಲಿ 110 ಮತಗಟ್ಟೆಗಳನ್ನು ಹೊಸದಾಗಿ ಸೇರಿಸಲಾಗಿದೆ.