ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರ ವಿವಾದ: ನ್ಯಾಯಾಲಯಕ್ಕೆ ಹಾಜರಾದ ನಟಿ ರಮ್ಯಾ
ಬೆಂಗಳೂರು: 2023 ರಲ್ಲಿ ಬಿಡುಗಡೆ ಆಗಿದ್ದ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾದಲ್ಲಿ ತನ್ನ ಅನುಮತಿ ಇಲ್ಲದೆ ತಮ್ಮ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ನಿರ್ಮಾಪಕರು, ನಿರ್ದೇಶಕರ ವಿರುದ್ಧದ ದೂರಿನ ವಿಚಾರಣೆಗೆ ನಟಿ ರಮ್ಯಾ ವಾಣಿಜ್ಯ ಸಂಕಿರ್ಣ ನ್ಯಾಯಾಲಯಕ್ಕೆ ಹಾಜರಾಗಿದ್ದರು.
2023 ರಲ್ಲಿಯೇ ರಮ್ಯಾ ದೂರು ದಾಖಲಿಸಿ, ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದಿದ್ದರು. ಆದರೆ ನ್ಯಾಯಾಲಯ ಆಗ ತಡೆ ನೀಡಿರಲಿಲ್ಲ. ಆದರೆ ವಿಚಾರಣೆ ಮುಂದುವರೆದಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರಾದ ರಮ್ಯಾ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
ಡಿಸೆಂಬರ್ 30 ರಂದು ಸಹ ನಟಿ ರಮ್ಯಾ, ವಿಚಾರಣೆಗೆ ಹಾಜರಾಗಿದ್ದರು. ಇಂದು ಕೆಲ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ನ್ಯಾಯಾಲಯ ಸೂಚಿಸಿದ್ದ ಕಾರಣಕ್ಕೆ ಆಗಮಿಸಿದ್ದ ರಮ್ಯಾ ದಾಖಲೆಗಳನ್ನು ನೀಡಿದ್ದಾರೆ. ವಿಚಾರಣೆ ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ರಮ್ಯಾ, ಪ್ರಕರಣದ ಬಗ್ಗೆ ಹೆಚ್ಚೇನು ಹೇಳಲಿಲ್ಲವಾದರೂ ಜನವರಿ 15 ಕ್ಕೆ ಮೂಲ ಒಪ್ಪಂದದ ಪ್ರತಿಯನ್ನು ಪ್ರಸ್ತುತ ಪಡಿಸುವಂತೆ ಹೇಳಿದ್ದಾರೆ. ಹೀಗಾಗಿ ಒರಿಜಿನಲ್ ಅಗ್ರಿಮೆಂಟ್ ಅನ್ನು ನೀಡುತ್ತಿರುವುದಾಗಿ ಹೇಳಿದರು.
ಪ್ರಕರಣ ಏನು?
ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿ, ವರುಣ್ ಹಾಗೂ ಪ್ರಜ್ವಲ್ ಬಿ ಪಿ ನಿರ್ಮಾಣ ಮಾಡಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ನಟಿಸಿದ್ದರು. ಸಿನಿಮಾದ ಪ್ರೋಮೋನಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನ ಇದೆ ಎನ್ನುವಾಗ ರಮ್ಯಾ ಸಿನಿಮಾದ ಮೇಲೆ ಪ್ರಕರಣ ದಾಖಲಿಸಿ, ನನ್ನ ಅನುಮತಿ ಇಲ್ಲದೆ ಸಿನಿಮಾದಲ್ಲಿ ನನ್ನ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದರು. ಆದರೆ ನ್ಯಾಯಾಲಯ ರಮ್ಯಾ ವಾದವನ್ನು ಪುರಸ್ಕರಿಸಲಿಲ್ಲ.