ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ
ಬೆಂಗಳೂರು : ಮುಸ್ಲಿಮ್ ಜನಾಂಗಕ್ಕೆ ಮತದಾನದ ಹಕ್ಕು ಇಲ್ಲದಂತೆ ಕಾನೂನು ಮಾಡಬೇಕು ಹಾಗೂ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶವು ಆಯೋಜಿಸಿದ್ದ ರೈತ ಘರ್ಜನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತದಾನ ಮಾಡುವ ಹಕ್ಕಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನದ ಅಧಿಕಾರ ಇಲ್ಲದಂತೆ ಮಾಡಿದರೆ, ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ವಕ್ಫ್ ಮಂಡಳಿ ಯಾವುದೇ ಕಾನೂನು ಇಲ್ಲದೆ ಜಮೀನು, ಕಟ್ಟಡ, ಆಸ್ತಿ ಪಾಸ್ತಿ ಕಿತ್ತುಕೊಳ್ಳಬಹುದು ಎಂದು ಹೇಳುತ್ತಿದೆ. ಅದು ಬಹಳ ಅನ್ಯಾಯ. ಯಾರದೋ ವಸ್ತು, ಯಾರೋ ಕಿತ್ತುಕೊಳ್ಳುವಂತಹದ್ದು ಸರಿಯಲ್ಲ. ಅವರ ವಸ್ತುವನ್ನು ಬೇರೆ ಯಾರಾದರೂ ಕಿತ್ತುಕೊಂಡರೆ ಅವರು ಸುಮ್ಮನಿರುತ್ತಾರಾ? ಎಂದು ಚಂದ್ರಶೇಖರ ಸ್ವಾಮೀಜಿ ಪ್ರಶ್ನಿಸಿದರು.
ಇದರ ಬಗ್ಗೆ ಎಲ್ಲರೂ ಸೇರಿ ಹೋರಾಟ ಮಾಡಿ, ರೈತರ ಜಮೀನು ರೈತರಿಗೆ ಇರಬೇಕು. ಹಿಂದಿನಿಂದಲೂ ನಮ್ಮ ದೇಶದಲ್ಲಿ, ಪ್ರಪಂಚದಲ್ಲಿ ರೈತ ಅನ್ನದಾತ. ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಅನ್ನ ನೀಡುತ್ತಿರುವುದು ರೈತ. ಆದುದರಿಂದ, ರೈತರನ್ನು ಉಳಿಸಬೇಕು, ರೈತರನ್ನು ಬೆಳೆಸಬೇಕು, ರೈತರನ್ನು ಬೆಳೆಯುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಇನ್ನೊಬ್ಬರ ಆಸ್ತಿಯನ್ನು ಮತ್ತೊಬ್ಬರು ಕಿತ್ತುಕೊಳ್ಳುವುದು ಧರ್ಮ ಅಲ್ಲ. ವಕ್ಫ್ ಅನ್ನೋದನ್ನು ಎಲ್ಲರೂ ವಿಚಾರ ಮಾಡಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ನಮ್ಮ ದೇಶಕ್ಕೆ ಒಳ್ಳೆ ಕೀರ್ತಿ, ಅಭಿಪ್ರಾಯ ಬರಬೇಕಾದರೆ, ಈ ರಾಜಕೀಯದವರು ಮಾಡುತ್ತಿರುವುದು ಮತಕ್ಕಾಗಿ, ಆ ಮುಸ್ಲಿಮ್ ಜನಾಂಗಕ್ಕೆ ಮತದಾನದ ಹಕ್ಕು ಇಲ್ಲದಂತೆ ಕಾನೂನು ಮಾಡಿದರೆ, ಎಲ್ಲರೂ ನೆಮ್ಮದಿಯಿಂದ ಇರಬಹುದು ಎಂದು ಅವರು ಹೇಳಿದರು.