ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ.ಮಾಸಿಕ ಗೌರವಧನ
ಬೆಂಗಳೂರು : ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ದಿನಗಳಿಂದ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟವು, ಬುಧವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಧ್ಯಪ್ರವೇಶದೊಂದಿಗೆ ಯಶಸ್ವಿಯಾಗಿ ಅಂತ್ಯಕಂಡಿದೆ.
ಜ.7ರಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೆ ನಿಶ್ಚಿತ ಗೌರವಧನವನ್ನು 15ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ 10ಸಾವಿರ ರೂ.ಮಾಸಿಕ ಗೌರವಧನ ನಿಗದಿ ಮಾಡಿದ್ದು, ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ.
ಮಾಸಿಕ 10 ಸಾವಿರ ರೂ.ನಿಶ್ಚಿತ ಗೌರವಧನದ ಜೊತೆಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಪ್ರೋತ್ಸಾಹಧನ ದೊರೆಯುವ ಖಾತ್ರಿ, ನಿವೃತ್ತಿ ಪರಿಹಾರ ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ 3 ತಿಂಗಳ ವೇತನ ಸಹಿತ ರಜೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಜೊತೆಗೆ, 2025-26ನೆ ಸಾಲಿನ ಬಜೆಟ್‍ನಲ್ಲಿಯೂ ಸಾಧ್ಯವಾದಷ್ಟು ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಬಜೆಟ್ ಪೂರ್ವಭಾವಿ ಸಭೆಗೆ ಸಂಘವನ್ನು ಆಹ್ವಾನಿಸಲಾಗುವುದು. ಉಳಿದ ಬೇಡಿಕೆಗಳನ್ನು ಇಲಾಖೆಯ ಮಟ್ಟದಲ್ಲಿ ಬಗೆಹರಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹೇಳಿದೆ.
ಕೃಷ್ಣಾದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆಶಾ ಸಂಘದ ಮುಖಂಡರಾದ ಕೆ.ಸೋಮಶೇಖರ್ ಯಾದಗಿರಿ, ಡಿ.ನಾಗಲಕ್ಷ್ಮಿ ಮತ್ತು ಶಿಕ್ಷಣ ತಜ್ಞ ಪ್ರೊ.ವಿ.ಪಿ.ನಿರಂಜನಾರಾಧ್ಯ, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದ್ದರು.
‘ಆಶಾ ಕಾರ್ಯಕರ್ತರೊಂದಿಗೆ ಸಂಧಾನ ಸಭೆ ನಡೆಸಲಾಗಿದ್ದು, ಈ ಹಿಂದೆ ಮಾಸಿಕ 8ಸಾವಿರ ರೂ.ಗೌರವಧನ ನೀಡಲಾಗುತ್ತಿದ್ದು, ಇದೀಗ ಪ್ರೋತ್ಸಾಹಧನ ಸೇರಿದಂತೆ ಪ್ರತಿ ತಿಂಗಳು 10ಸಾವಿರ ರೂ.ಗಳ ಗೌರವಧನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಆಶಾಗಳು ಮುಷ್ಕರ ಕೈಬಿಡಲು ಸಮ್ಮತಿಸಿದ್ದಾರೆ. ಈ ಮೊತ್ತವನ್ನು ನೀಡಲು, ಸರಕಾರದ ಆರ್ಥಿಕ ಸ್ಥಿತಿ ಸದೃಢವಾಗಿದೆ’
-ಮುಖ್ಯಮಂತ್ರಿ ಸಿದ್ದರಾಮಯ್ಯ