ಬಾಗಲಕೋಟೆ | ಕಾರ್ಯಕರ್ತರಿಗೆ ಬಂದೂಕು ತರಬೇತಿ : ಶ್ರೀರಾಮಸೇನೆಯ 20ಕ್ಕೂ ಅಧಿಕ ಮುಖಂಡರ ವಿರುದ್ಧ ಎಫ್‌ಐಆರ್
ಬಾಗಲಕೋಟೆ: ಶ್ರೀರಾಮಸೇನೆ ತನ್ನ ಕಾರ್ಯಕರ್ತರಿಗೆ ಅನಧಿಕೃತವಾಗಿ ಬಂದೂಕು ತರಬೇತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಂಘಟನೆಯ 20ಕ್ಕೂ ಅಧಿಕ ಮುಖಂಡರ ವಿರುದ್ಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಜಿ ಬೀಳಗಿ ನಿವಾಸಿ ಶಿವಪ್ಪ ಹೂಗಾರ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಶ್ರೀರಾಮ ಸೇನೆಯ ಮುಖಂಡರು, ಬಂದೂಕು ತರಬೇತಿಯ ಪ್ರಮುಖ ಆಯೋಜಕರು ಆಗಿರುವ ಪ್ರಕಾಶ ಪತ್ತಾರ, ಮಹೇಶ ಬಿರಾದಾರ, ಯಮನಪ್ಪ ಕೋರಿ ಸಾ.ಹೊಸೂರ, ಆನಂದ ಜಂಬಗಿಮಠ ಸಾ.ಜಮಖಂಡಿ, ರಾಜು ಖಾನಪ್ಪನವರ, ಗಂಗಾಧರ ಕುಲಕರ್ಣಿ, ಮಹೇಶ ಕೊಕಡೆ ಎಂಬವರು ಸೇರಿದಂತೆ 20ಕ್ಕೂ ಅಧಿಕ ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸರ್ವೇ ನಂಬರ್ -17ರಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿ, ಅನುಮತಿ ಇಲ್ಲದೆ, ಅಕ್ರಮವಾಗಿ ಪ್ರವೇಶಿಸಿ, ಬಂದೂಕು ತರಬೇತಿ ನೀಡಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಜನರಿಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಬಿ.ಎನ್.ಎಸ್. ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶ್ರೀರಾಮಸೇನೆಯು ಇತ್ತೀಚೆಗೆ ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ತನ್ನ ಕಾರ್ಯಕರ್ತರಿಗೆ ಆರು ದಿನಗಳ ಕಾಲ ಬಂದೂಕು ಮತ್ತು ಯುದ್ಧಕಲೆ ತರಬೇತಿ ನೀಡಿತ್ತು.
ವ್ಯಕ್ತಿತ್ವ ವಿಕಸನ ಹಾಗೂ ಸ್ವಸುರಕ್ಷೆಗಾಗಿ ವಿವಿಧ ಶಾರೀರಿಕ ರಕ್ಷಾ ತರಬೇತಿ ಎಂಬ ಹೆಸರಿನಲ್ಲಿ ಬಂದೂಕು ತರಬೇತಿ ನೀಡಲಾಗಿದೆ. ಈ ಬಗ್ಗೆ ವೀಡಿಯೊ ವೈರಲ್ ಆಗಿತ್ತು.