ಬಾಗಲಕೋಟೆ | ಸರಣಿ ಅಪಘಾತ: ಮೂವರು ಮೃತ್ಯು

ಬಾಗಲಕೋಟೆ: ಸರಣಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮುಂಜಾವ ಸಂಭವಿಸಿದೆ.
ಟಾಟಾ ಏಸ್, ಕಾರು ಮತ್ತು ಎರಡು ಬೈಕ್ ಗಳ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಟಾಟಾ ಏಸ್, ಕಾರು ಮತ್ತು ಬೈಕೊಂದರಲ್ಲಿದ್ದ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದ ನಿವಾಸಿ ಆನಂದ ಬಾಡಗಿ(22), ಬೆಳಗಾವಿ ಜಿಲ್ಲೆ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ್ (42) ಮತ್ತು ವಿಜಯಪುರ ಜಿಲ್ಲೆ ಬೆನಕನಹಳ್ಳಿಯ ಮಹಾಂತೇಶ ಹೊನ್ನಾಕಟ್ಟೆ (33) ಎಂದು ಗುರುತಿಸಲಾಗಿದೆ.
ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಟಾಟಾ ಏಸ್ ಮತ್ತು ವಿಜಯಪುರದಿಂದ ಜಮಖಂಡಿಯತ್ತ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಈ ವೇಳೆ ಟಾಟಾ ಏಸ್ ವಾಹನದ ಹಿಂದಿನಿಂದ ಬರುತ್ತಿದ್ದ ಎರಡು ಬೈಕ್ ಗಳು ಚಾಲಕನ ನಿಯಂತ್ರಣ ತಪಪ್ಇ ಏಸ್ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
