ತೋಟದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ: ಸಚಿವ ಕೆ.ಜೆ.ಜಾರ್ಜ್

ಬಾಗಲಕೋಟೆ : ತೋಟದಲ್ಲಿರುವ ರೈತರ ಮನೆಗಳಿಗೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವ ಚಿಂತನೆ ಇದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಇಂದಿಲ್ಲಿ ಹೇಳಿದ್ದಾರೆ.
ಬುಧವಾರ ನೂತನ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆಗೊಂಡ ಸಂತ್ರಸ್ತರು ತಮ್ಮ ತೋಟಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆ ಮನೆಗಳಿಗೂ ನಿರಂತರ ಜ್ಯೋತಿ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ತೋಟದ ಮನೆಗಳಿಗೆ ಸದ್ಯ 7 ಗಂಟೆ ತ್ರೀಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಉಳಿದಂತೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ ಒಂದು ತಿಂಗಳು ಮಾತ್ರ ವಿದ್ಯುತ್ ಸಮಸ್ಯೆಯಿತ್ತು. ಆದರೂ ಜನರಿಗೆ ಹಾಗೂ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಪಂಜಾಬ್ ಹಾಗೂ ಉತ್ತರಪ್ರದೇಶಗಳ ಜತೆ ವಿದ್ಯುತ್ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂಬರುವ ಬೇಸಿಗೆಯಲ್ಲೂ ಜನರಿಗೆ ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ದವಾಗಿದೆ ಎಂದರು.
ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ‘ಎಚ್‍ಟಿ ಹಾಗೂ ಎಲ್‍ಟಿ ಮಾರ್ಗದ ವಾಹನ ಬದಲಾವಣೆ ಕಾಮಗಾರಿಗಳು ಮಂಜೂರಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಗೊಳ್ಳಬೇಕಿದೆ. ಅಲ್ಲದೇ ಹೆಚ್ಚುವರಿಯಾಗಿ ಪರಿವರ್ತಕಗಳನ್ನು ಸಹ ಅಳವಡಿಸಲು ಬಾಕಿ ಇದ್ದು, ತುರ್ತಾಗಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲು ಇಂಧನ ಸಚಿವರಿಗೆ ತಿಳಿಸಿದರು. ಈ ಬಗ್ಗೆ ಆದ್ಯತೆ ಮೇರೆಗೆ ಕ್ರಮವಹಿಸಲು ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.