ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ : ಬಂಧಿತ ಕೊನೆ ಆರೋಪಿಗೂ ಜಾಮೀನು

Update: 2025-01-10 13:42 GMT

ಗೌರಿ ಲಂಕೇಶ್ 

ಬೆಂಗಳೂರು : ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿದ್ದ ಶರದ್ ಬಾಹು ಸಾಹೇಬ್ ಕಲಾಸ್ಕರ್‌ಗೆ ಜಾಮೀನು ದೊರೆತಿದ್ದು, ಈ ಮೂಲಕ ಹತ್ಯೆ ಪ್ರಕರಣದ ಬಂಧನಕ್ಕೊಳಗಾಗಿದ್ದ ಆರೋಪಿಗಳೆಲ್ಲರಿಗೂ ಜಾಮೀನು ದೊರೆತಂತೆ ಆಗಿದೆ.

ಶುಕ್ರವಾರ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವೂ ಅರ್ಜಿ ವಿಚಾರಣೆ ನಡೆಸಿದ್ದು, ಆರೋಪಿ ಶರದ್ ಬಾಹು ಸಾಹೇಬ್ ಕಲಾಸ್ಕರ್‌ಗೆ 2 ಲಕ್ಷ ರೂ.ಗಳ ಬಾಂಡ್ ಮತ್ತು ಎರಡು ಶ್ಯೂರಿಟಿಗಳನ್ನು ನೀಡಬೇಕು ಎಂದು ತಿಳಿಸಿ ಷರತ್ತು ಬದ್ಧ ಜಾಮೀನು ನೀಡಿದೆ.

ಈ ವೇಳೆ ನ್ಯಾಯಾಧೀಶ ಮುರುಳೀಧರ್ ಪೈ ಉಲ್ಲೇಖಿಸಿ, ಸಂವಿಧಾನದ 21ರ ಅಡಿ ಬದುಕುವುದು ಮೂಲಭೂತ ಹಕ್ಕು ಎಂಬುದಾಗಿ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಆರೋಪಿಗಳ ವಿರುದ್ಧ ವಿಚಾರಣೆ ಬಾಕಿಯಿರುವ ಸಂದರ್ಭದಲ್ಲಿ ಅವರ ವೈಯಕ್ತಿಕ ಹಕ್ಕು ಕಸಿದುಕೊಳ್ಳಲಾಗುವುದಿಲ್ಲ. ಅನಗತ್ಯ ವಿಳಂಬವು ಬದುಕುವ ಹಕ್ಕನ್ನು ಮೊಟಕುಗೊಳಿಸಿದಂತಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಅರ್ಜಿದಾರರು 2018ರ ಸೆಪ್ಟೆಂಬರ್ 4ರಿಂದ ಬಂಧನದಲ್ಲಿದ್ದು, ಜಾಮೀನು ಮಂಜೂರು ಮಾಡಬಹುದಾಗಿದೆ ಎಂದಿದ್ದಾರೆ.

ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ವಿಚಾರಣೆ ವೇಳೆ ಅರ್ಜಿದಾರ ಆರೋಪಿಗೆ ಜಾಮೀನು ಮಂಜೂರು ಸಿಕ್ಕಿದರೆ ಇದೇ ಮಾದರಿ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವ ಆತಂಕ ಇದೆ ಎಂದು ಹೇಳಿದರು.

ಇದಕ್ಕೆ ಪ್ರಕರಣದ ಸಾಕ್ಷಿಗಳ ಹೆಸರುಗಳನ್ನು ಆರೋಪಿಗಳಿಗೆ ತಿಳಿಯದಂತೆ ಮರೆ ಮಾಚಲಾಗಿದೆ. ಅಂತಹ ಸಾಕ್ಷಿಗಳನ್ನು ನಾಶ ಮಾಡುವ ಆತಂಕ ಇರುವುದಿಲ್ಲ. ಈಗಾಗಲೇ 164 ಸಾಕ್ಷಿಗಳನ್ನು ಪರಿಶೀಲಿಸಿದ್ದು, ಉಳಿದ ಸಾಕ್ಷಿಗಳಲ್ಲಿ ಹೆಚ್ಚಿನದಾಗಿ ಪೊಲೀಸರು, ಇತರ ಇಲಾಖೆಗಳ ಅಧಿಕಾರಿಗಳಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಆತಂಕ ಪರಿಗಣಿಸಲಾಗದು ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಅಮೂಲ್ ಕಾಳೆ, ರಾಜೇಶ್ ಡಿ ಬಂಗೇರಾ, ವಾಸುದೇವ್ ಸೂರ್ಯವಂಶಿ, ರುಷಿಕೇಶ್ ದೇವ್ಡೇಕರ್, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ರಾಮಚಂದ್ರ ಬುಡ್ಡಿ ಮತ್ತು ಮನೋಹರ್ ದುಂಡೀಪ ಯಡವೆ ಅವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಕಳೆದ ವರ್ಷ ಜಾಮೀನು ಮಂಜೂರು ಮಾಡಿತ್ತು. ಇನ್ನೂ ಈ ಪ್ರಕರಣದಲ್ಲಿ ಒಟ್ಟು 18 ಮಂದಿ ಆರೋಪಿಗಳಿದ್ದು, 15ನೆ ಆರೋಪಿ ವಿಕಾಸ್ ಪಟೇಲ್ ಅಲಿಯಾಸ್ ದಾದಾ ಅಲಿಯಾಸ್ ನಿಹಾಲ್ ಇಲ್ಲಿಯವರೆಗೂ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News