54 ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ; ವೈಕುಂಠ ಏಕಾದಶಿಯತ್ತ ಹೋದ ಸಿಬ್ಬಂದಿಗೆ ಲೋಕಾಯುಕ್ತ ತರಾಟೆ
ಬೆಂಗಳೂರು : ಬಿಬಿಎಂಪಿ ಕಂದಾಯ ಕಚೇರಿ ಕಾರ್ಯ ವೈಖರಿ ಕುರಿತು ದೂರುಗಳ ಸುರಿಮಳೆ ಬೆನ್ನಲ್ಲೇ 54 ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಏಕ ಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಕೆಲ ಸಿಬ್ಬಂದಿ ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆ ಹೋಗಿರುವುದನ್ನು ಗಮನಿಸಿ ಗರಂ ಆಗಿ ಮೊಬೈಲ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಖುದ್ದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪಲೊಕಾಯುಕ್ತರು ದಾಳಿಯಲ್ಲಿ ಭಾಗಿಯಾಗಿ ಅಧಿಕಾರಿಗಳ ಬೆವಳಿಸಿದ್ದಾರೆ. ಅಷ್ಟೇ ಮಾತ್ರವಲ್ಲದೆ ಮಧ್ಯಾಹ್ನದಿಂದ ತಪಾಸಣೆ ನಡೆಯುತ್ತಿದ್ದು, ಇನ್ನೂ ಹಲವು ಕಚೇರಿಗಳಲ್ಲಿ ತಡರಾತ್ರಿವರೆಗೆ ತಪಾಸಣೆ ಮುಂದುವರೆದಿದೆ.
ಅದರಲ್ಲೂ, ಲಾಲ್ ಬಾಗ್ ರಸ್ತೆಯ ಬಿಬಿಎಂಪಿ ಕಚೇರಿ ಭೇಟಿ ವೇಳೆ ಅಧಿಕಾರಿಗಳೇ ಇರಲಿಲ್ಲ. ಅಧಿಕಾರಿಗಳೆಲ್ಲಾ ದೇವಸ್ಥಾನಕ್ಕೆೆ ಹೋಗಿದ್ದಾರೆ ಎಂದು ಸಹಾಯಕರು ಹೇಳಿದ್ದರು. ಈ ವೇಳೆ ಉಪಲೋಕಾಯುಕ್ತ ನ್ಯಾ.ವೀರಪ್ಪ ಅವರು ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆೆ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.
ಇನ್ನೊಂದೆಡೆ, ನ್ಯಾ.ವೀರಪ್ಪ ಅವರು ಸೌತ್ ಆ್ಯಂಡ್ ಸರ್ಕಲ್ ಬಿಬಿಎಂಪಿ ಕಚೇರಿಗೆ ತೆರಳಿದಾಗ ಕೇಸ್ ವರ್ಕರ್ ಕವಿತಾ ಬದಲು ಅವರ ಮಗ ನವೀನ್ ಹಾಜರಾಗಿರುವುದು ಕಂಡು ಬಂದಿತ್ತು. ಮಗನ ಜೊತೆ ಸಹಾಯಕ್ಕೆೆ ನಿಯಮ ಉಲ್ಲಂಘಸಿ ಗೀತಾ ಎಂಬ ಸಹಾಯಕಿಯನ್ನು ಕವಿತಾ ನೇಮಿಸಿರುವುದು ಬೆಳಕಿಗೆ ಬಂದಿದೆ.
ಕಚೇರಿಗೆ ದಾಳಿ ನಡೆಸಿದ ವೇಳೆ ನವೀನ್ ಅವರನ್ನು ಪ್ರಶ್ನಿಸಿದಾಗ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ನೇರವಾಗಿ ಕವಿತಾಗೆ ಕರೆ ಮಾಡಿಸಿದ ನ್ಯಾ.ವೀರಪ್ಪ ಗರಂ ಆಗಿದ್ದಾರೆ.
ಒಟ್ಟಿನಲ್ಲಿ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿಯೂ ಸಹ ಬಹುತೇಕ ಅಧಿಕಾರಿ ಮತ್ತು ಸಿಬ್ಬಂದಿಗಳು ಗೈರುಹಾಜರಿರುವುದು ಕಂಡುಬಂದಿದೆ. ಕಾರ್ಯಪಾಲಕ ಅಭಿಯಂತರರು, ಬಿಬಿಎಂಪಿ ಕೆಆರ್ ಪುರಂ ವಿಭಾಗದಲ್ಲಿ ತಪಾಸಣೆ ಸಮಯದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಬಳಿ ಸುಮಾರು 50 ಸಾವಿರ ರೂ. ನಗದು ಹಾಗೂ ಸಹಾಯಕ ಅಭಿಯಂತರರ ಬಳಿ 43 ಸಾವಿರ ರೂ. ಪತ್ತೆೆಯಾಗಿದೆ. ಈ ಸಂಬಂಧ ಅವರು ನಗದು ಘೋಷಣಾ ವಹಿಯಲ್ಲಿ ತಮ್ಮ ಬಳಿ ಇರುವ ಹಣದ ಬಗ್ಗೆೆ ನಮೂದು ಮಾಡಿರುವುದಿಲ್ಲ. ಈ ನಗದಿನ ಬಗ್ಗೆೆ ಸಮಂಜಸ ಉತ್ತರ ನೀಡಿರುವುದಿಲ್ಲ. ಆನಗದನ್ನು ಮಹಜರು ಮಾಡಿ ವಶಪಡಿಸಿಕೊಳ್ಳಲಾಗಿದೆ.
ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರದಿ ನೀಡಲು ಲೋಕಾಯುಕ್ತರು ಸೂಚಿಸಿದ್ದಾರೆ.
ಮುಖ್ಯವಾಗಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಆರ್‌ಓ ಕಚೇರಿ ಹೆಬ್ಬಾಳ ಸಬ್ ಡಿವಿಷನ್ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆೆಯಲ್ಲಿರುವ ಕಚೇರಿಗೆ ಖುದ್ದು ಭೇಟಿ ನೀಡಿದ್ದರು.
ಕಚೇರಿಯಲ್ಲಿ ಯಾವುದೇ ವಹಿಗಳನ್ನು ಅಂದರೆ ಹಾಜರಾತಿ ವಹಿ, ನಗದು ಘೋಷಣಾ ವಹಿ, ಚಲನಾ-ವಲನಾ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿರುವುದಿಲ್ಲ ಎಂಬುದು ಪತ್ತೆಯಾಗಿದೆ.
ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಬ್ಬಾಳ ಸಬ್ ಡಿವಿಷನ್ ಕಚೇರಿಯಲ್ಲಿ 21 ಜನ ಹಾಜರಾತಿ ವಹಿಗೆ ಸಹಿ ಮಾಡಿದ್ದು, ಕಚೇರಿಯಲ್ಲಿ ಕೇವಲ ಮೂರು ಜನ ಮಾತ್ರ ಇದ್ದರು. ಎಆರ್‌ಓ ಸಹ ಕಚೇರಿಯಲ್ಲಿ ಹಾಜರಿರಲಿಲ್ಲ. ಕರೆ ಮಾಡಿ ಕೇಳಿದಾಗ ಬೆಳಗ್ಗೆೆ ಕಚೇರಿಗೆ ಬಂದು ನಂತರ ಮುಖ್ಯ ಕಚೇರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ.
ಆದರೆ ಆ ಬಗ್ಗೆೆ ಚಲನಾ-ವಲನಾ ವಹಿಯಲ್ಲಿ ನಮೂದು ಮಾಡಿರುವುದಿಲ್ಲ. ಎಆರ್‌ಓ ಅವರು ಬೆಳಗ್ಗೆೆ ಕಚೇರಿಗೆ ಬಂದು ಮಧ್ಯಾಹ್ನದವರೆಗೂ ಕೆಲಸ ಮಾಡಿರುತ್ತೇನೆಂದು ಹೇಳಿರುತ್ತಾರೆ. ಆದರೆ ಹಾಜರಾತಿ ವಹಿಯಲ್ಲಿ ಆಗಸ್ಟ್- 2023 ರ ನಂತರ ನಿರ್ವಹಣೆ ಮಾಡಿರುವುದಿಲ್ಲ. ಈ ಬಗ್ಗೆೆ ಹಾಜರಿದ್ದ ಸಿಬ್ಬಂದಿಗಳು ಯಾವುದೇ ಸಮರ್ಪಕ ಉತ್ತರ ನೀಡಿರುವುದಿಲ್ಲ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಿಢೀರ್ ದಾಳಿ ಏಕೆ? :
ಬಿಬಿಎಂಪಿ ಆರ್‌ಓ ಮತ್ತು ಎಆರ್‌ಓ ಕಚೇರಿಗಳಲ್ಲಿ ಪಾಲಿಕೆಗೆ ಸಂಬಂಧಿಸಿದ ಸ್ವತ್ತುಗಳಿಗೆ ಇ-ಖಾತಾ ನೀಡುತ್ತಿದೆ. ಸದರಿ ಇ-ಖಾತಾ ಪಡೆಯುವಲ್ಲಿ ಗ್ರಾಹಕರು ಹಲವಾರು ಸಮಸ್ಯೆೆಗಳನ್ನು ಎದುರಿಸುತ್ತಿದ್ದ ಬಗ್ಗೆೆ ಅನೇಕ ದೂರುಗಳು ಲೋಕಾಯುಕ್ತಕ್ಕೆೆ ಬಂದಿದ್ದವು ಎನ್ನಲಾಗಿದೆ.