ರಾಜ್ಯವನ್ನು ‘ಕೌಶಲ್ಯ ಅಭಿವೃದ್ಧಿ ಹಬ್’ ಮಾಡುವುದೇ ಸರಕಾರದ ಗುರಿ : ಡಾ.ಶರಣಪ್ರಕಾಶ್ ಪಾಟೀಲ್
ಬೆಂಗಳೂರು : ಉದ್ಯೋಗ ಕ್ಷೇತ್ರದಲ್ಲಿನ ಬೇಡಿಕೆಗಳನ್ನು ಪೂರೈಸಲು ಸಹಯೋಗ, ಸಹಭಾಗಿತ್ವ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ನಮ್ಮ ಸರಕಾರ ಮುಂದಾಗಿದ್ದು, ರಾಜ್ಯವನ್ನು ‘ಕೌಶಲ್ಯ ಅಭಿವೃದ್ಧಿ ಹಬ್’ ಮಾಡುವುದೇ ನಮ್ಮ ಧ್ಯೇಯ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ವತಿಯಿಂದ ನಡೆದ ಕೈಗಾರಿಕೆ-ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಜೊತೆಗೆ ಯುವ ಸಮುದಾಯದವರಲ್ಲಿ ಕೌಶಲ್ಯಾಭಿವೃದ್ಧಿ ಮಾಡಲು ರಾಜ್ಯ ಸರಕಾರ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಹಲವಾರು ಉಪ ಕ್ರಮಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು.
ಗ್ರಾಮೀಣ ಭಾಗದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಈ ಕೈಗಾರಿಕೆ-ಶೈಕ್ಷಣಿಕ ಸಮಾವೇಶ ಆಯೋಜಿಸಲಾಗಿದ್ದು, ಶೈಕ್ಷಣಿಕ-ವೃತ್ತಿಪರ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಬೃಹತ್ ವೇದಿಕೆಯಾಗಿದೆ ಎಂದು ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
‘ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ’ ಎಂಬುದು ನಮ್ಮ ಸರಕಾರದ ಮೂಲ ಮಂತ್ರವಾಗಿದೆ. ರಾಜ್ಯದ ಹಲವೆಡೆ ಜಿಟಿಟಿಸಿ ಸ್ಥಾಪಿಸಲು ಸರಕಾರ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲೆಡೆಯೂ ಕೌಶಲ್ಯ ಆಧಾರಿತ ತರಬೇತಿಯನ್ನು ಯುವ ಸಮೂಹಕ್ಕೆ ನೀಡಲಾಗುವುದು ಎಂದು ಶರಣಪ್ರಕಾಶ್ ಪಾಟೀಲ್ ವಿವರಿಸಿದರು.
ಮುಂಬರುವ ಭಾರತ ಕೌಶಲ್ಯ-2025 ಸ್ಪರ್ಧೆಗಳು ಮತ್ತು ವಿಶ್ವ ಕೌಶಲ್ಯ ಸ್ಪರ್ಧೆ- 2026ಗಾಗಿ 18 ಕೌಶಲ್ಯ ವಿಭಾಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ನಮ್ಮ ಜಿಟಿಸಿಸಿ ಸಿದ್ಧಪಡಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಮ್ಮ ರಾಜ್ಯದವರು ಸಜ್ಜಾಗಲಿದ್ದಾರೆ ಎಂದು ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ವೈ.ಕೆ.ದಿನೇಶ್‍ಕುಮಾರ್ ಸೇರಿದಂತೆ ಉದ್ಯಮಿಗಳು ಉಪಸ್ಥಿತರಿದ್ದರು.
ಸಂಡೂರಿನಲ್ಲಿ ಕೌಶಲ್ಯ ಅಕಾಡಮಿ, ಕಲಬುರಗಿ, ಕೊಪ್ಪಳ, ಮೈಸೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ..!
ರಾಜ್ಯದಲ್ಲಿ ಕೌಶಲ್ಯ ಶಕ್ತಿ ಹೆಚ್ಚಿಸಲು ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕೈಗಾರಿಕಾ ಮತ್ತು ಉದ್ಯಮ ವಲಯಗಳಲ್ಲಿ ಕೌಶಲ್ಯಪೂರ್ಣ ಉದ್ಯೋಗಿಗಳ ಅಗತ್ಯತೆಯನ್ನು ಪೂರೈಸಲು 300 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಕೌಶಲ್ಯ ಅಕಾಡಮಿ ಸ್ಥಾಪಿಸಲಾಗುವುದು. ಇದಲ್ಲದೇ, ಜಿಟಿಟಿಸಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಕಲಬುರಗಿ, ಕೊಪ್ಪಳದ ತಲಕಲ್ ಮತ್ತು ಮೈಸೂರಿನ ವರುಣಾದಲ್ಲಿ ಆರಂಭಿಸಲಾಗುವುದು ಎಂದು ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.
ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ: ಈ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿಗಾಗಿ ಇಂಟೆಲ್, ಐಬಿಎಂ, ನಾಸ್ಕಾಂ, ಟೆಸ್ಲಾ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಟೊಯೊಟಾ, ಸೀಮನ್ಸ್, ಆಟೊ ಡೆಸ್ಕ್, ಮಾಸ್ಟರ್ ಕ್ಯಾಮ್, ಗ್ರೀನ್ ಸ್ಕಿಲ್ಸ್ ಕ್ಷೇತ್ರದಲ್ಲಿ ಗಿಜ್ ಜೊತೆಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಐಐಎಸ್ಸಿ, ವಿಟಿಯು, ಕಲಬುರಗಿ ವಿ.ವಿ., ಆರ್‌ಎನ್‍ಎಸ್‍ಐಟಿ, ಬಿಎನ್‍ಎಂಐಟಿ ಜೊತೆ ಕೌಶಲ್ಯಾಭಿವೃದ್ಧಿ ತರಬೇತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಚಿವ ಎಂದು ಶರಣಪ್ರಕಾಶ್ ಪಾಟೀಲ್ ತಿಳಿಸಿದರು.