ದಲಿತರಿಗಾಗಿ ರಾಷ್ಟ್ರೀಯ ಮಾಧ್ಯಮ ಸಂಸ್ಥೆ ನಿರ್ಮಾಣವಾಗಲಿ : ರಾಜರತ್ನ ಅಂಬೇಡ್ಕರ್

Update: 2025-01-10 17:45 GMT

ಮೈಸೂರು : ಅಂಬೇಡ್ಕರ್‌ರ ವಿಚಾರಧಾರೆ ಪಾಲನೆ ಮಾಡುವವರು ಅವರ ನಿಜವಾದ ಅನುಯಾಯಿಗಳು ಎಂದು ಡಾ.ಬಿ.ಆರ್.ಅಂಬೇಡ್ಕರ್‌ರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಶುಕ್ರವಾರ ನಡೆದ ಕರ್ನಾಟಕ ಸಮತಾ ಸೈನಿಕ ದಳದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಪುರುಷರಿಗೆ ವಾರಸುದಾರರಿಲ್ಲ. ಅನುಯಾಯಿಗಳು ಮಾತ್ರ ಇರುತ್ತಾರೆ. ಅದೇ ರೀತಿ ಅಂಬೇಡ್ಕರ್ ಸಿದ್ಧಾಂತವನ್ನು ಅನುಸರಿಸುವ ಮೂಲಕ ಅವರ ಅನುಯಾಯಿಗಳು ಆಗಬೇಕು ಎಂದರು.

ದಲಿತರಿಗಾಗಿ ರಾಷ್ಟ್ರೀಯ ಮಾಧ್ಯಮ ಸಂಸ್ಥೆ, ವಿಶ್ವವಿದ್ಯಾನಿಲಯ, ಆಸ್ಪತ್ರೆ ಇಲ್ಲ. ಸಮತಾ ಸೈನಿಕ ದಳದ ಮುಂದಿನ 150ನೇ ವರ್ಷದ ಹೊತ್ತಿಗೆ ಮೈಸೂರಿನಲ್ಲೇ ಇದರಲ್ಲಿ ಒಂದಾದರೂ ನಿರ್ಮಾಣವಾಗಬೇಕು ಎಂದು ಹೇಳಿದರು.

ನೂರು ವರ್ಷಗಳ ಹಿಂದೆಯೇ ಬಾಬಾ ಸಾಹೇಬ್ ಅವರು ಮಾಧ್ಯಮ ಸಂಸ್ಥೆ, ಸಂಘಟನೆ ಮತ್ತು ವ್ಯವಸ್ಥೆ ಕಟ್ಟಿದ್ದರು. ಆದರೆ ಈಗ ದಲಿತರ ಪರ ಇಂತಹ ಒಂದು ವ್ಯವಸ್ಥೆ ಸೃಷ್ಟಿ ಮಾಡಲು ಏಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದರು.

ದಲಿತರು ಯಾರನ್ನೂ ಅವಲಂಬಿಸಬಾರದು ಎಂಬುದು ಅಂಬೇಡ್ಕರ್ ಇಚ್ಛೆಯಾಗಿತ್ತು. ಆದರೀಗ ದಲಿತರ ಹಿತಕಾಯುವ ಸಂವಿಧಾನವನ್ನು ದುರ್ಬಲಗೊಳಿಸಿ, ಸರಕಾರಿ ಸಂಸ್ಥೆಗಳೆಲ್ಲವನ್ನೂ ಹಾನಿ ಮಾಡಲಾಗುತ್ತಿದೆ. ಇದು ಬಾಬಾ ಸಾಹೇಬರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ, ದಲಿತರ ಹಿತಾಸಕ್ತಿ ರಕ್ಷಣೆಗಾಗಿ ಅವರು ಸಂವಿಧಾನವೊಂದನ್ನೇ ಕೊಟ್ಟು ಹೋಗಿಲ್ಲ. ಬುದ್ಧ ಮಾರ್ಗವನ್ನೂ ಬಿಟ್ಟು ಹೋಗಿದ್ದಾರೆ. ಸಂವಿಧಾನ ನಮ್ಮನ್ನು ರಕ್ಷಣೆ ಮಾಡದಿದ್ದರೆ ಇದುವೇ ನಮ್ಮ ರಕ್ಷಣೆಗೆ ಬರಲಿದೆ ಎಂದರು.

ಈಗಲೂ ಜಾತಿ ವಿನಾಶವಾಗಿಲ್ಲ. ಬದಲಿಗೆ ಇನ್ನಷ್ಟು ಉಪಜಾತಿ ಹುಟ್ಟಿಕೊಂಡಿವೆ. ಹೀಗಾದರೆ, ಜಾತಿ ನಾಶ ಸಾಧ್ಯವಾಗಲಿದೆಯೇ? ಎಂದು ಪ್ರಶ್ನಿಸಿದರು.

ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಭಂತೇಜಿ, ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಕಮಲಮ್ಮ, ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಆರ್.ಎಂ.ಎನ್.ರಮೇಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಬಕ್ಕಾಯಿ, ಭೀಮಾ ಪ್ರಜಾ ಸಂಘದ ರಾಜ್ಯಾಧ್ಯಕ್ಷ ಮುರಗೇಶ್, ರಂಗಕರ್ಮಿ ಜನಾರ್ದನ್ (ಜನ್ನಿ) ಇನ್ನಿತರರು ಹಾಜರಿದ್ದರು.

ಬಾಬಾ ಸಾಹೇಬರು 1924ರಲ್ಲಿ ಸಮತಾ ಸೈನಿಕದಳ ಸ್ಥಾಪನೆ ಮಾಡಿದರು. ಈ ಸಂಘಟನೆಯನ್ನು ನಕಲು ಮಾಡಿಕೊಂಡು ಆರೆಸ್ಸೆಸ್ ಬೆಳೆಯಿತು. ಅಂಬೇಡ್ಕರ್ ಸಂಘಟನೆಯನ್ನು ನೋಡಿ ಮನುವಾದದ ಚಿಂತನೆಯ ಸಂಸ್ಥೆಗಳು, ವಿಚಾರವನ್ನು ಕಟ್ಟಿಕೊಳ್ಳಲಾಯಿತು. ಮನುವಾದವು ತನ್ನ ವಿರೋಧಿ ವಿಚಾರಧಾರೆ, ಮಹಾಪುರುಷರನ್ನು ಹಾನಿ ಮಾಡಲು ಸಾಧ್ಯವಾಗದಿದ್ದರೆ ಅದನ್ನೇ ಸ್ವಾಧೀನ ಪಡಿಸಿಕೊಳ್ಳುತ್ತದೆ. ವಿಷ್ಣುವಿನ ಅವತಾರ ಎನ್ನುವ ಮೂಲಕ ಬುದ್ಧ, ಅಂಬೇಡ್ಕರ್ ಅವರನ್ನು ತಮ್ಮದಾಗಿಸಿಕೊಳ್ಳಲು ಹುನ್ನಾರ ನಡೆದಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು.

-ರಾಜರತ್ನ ಅಂಬೇಡ್ಕರ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News