ಚಿಂತಕ, ವಿದ್ವಾಂಸ ಪ್ರೊ.ಮುಝಫರ್ ಅಸ್ಸಾದಿ ಅಂತಿಮ ದರ್ಶನ ಪಡೆದ ಗಣ್ಯರು
ಮೈಸೂರು : ಚಿಂತಕ, ವಿದ್ವಾಂಸ, ಮೈಸೂರು ವಿ.ವಿಯ ಹಂಗಾಮಿ ಕುಲಪತಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮುಝಫರ್ ಅಸ್ಸಾದಿ (63) ಅವರು ಶುಕ್ರವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರಿ, ಪುತ್ರ, ಮೂವರು ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೈಸೂರಿನ ಸ್ವಗೃಹದಲ್ಲಿ ಅಂತಿಮ ದರ್ಶನ:
ಪ್ರೊ.ಮುಝಫರ್ ಅಸ್ಸಾದಿ ಅವರ ಮೃತ ದೇಹವನ್ನು ಶನಿವಾರ ಬೆಳಿಗ್ಗೆ 8 ಗಂಟೆ ಸಮಯಕ್ಕೆ ಬೆಂಗಳೂರಿನಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಅವರ ಸ್ವಗೃಹಕ್ಕೆ ತಂದು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಯಿತು.
ಮಧ್ಯಾಹ್ನ 3 ಗಂಟೆಯವರೆಗೂ ಅವರ ನಿವಾಸದಲ್ಲೇ ಸಾರ್ವಜನಿಕರು, ಹಿತೈಷಿಗಳು, ಬಂದುಗಳು, ಸ್ನೇಹಿತರು ಮತ್ತು ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದರು.
ಬಳಿಕ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಎದುರಿಗಿರುವ ಮುಸ್ಲಿಂ ಹಾಸ್ಟೆಲ್‌ನಲ್ಲಿ ಸ್ವಲ್ಪ ಸಮಯ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಸಂಜೆ 5.30 ರ ನಂತರ ಮೈಸೂರು-ಬೆಂಗಳೂರು ರಸ್ತೆಯ ಬನ್ನಿಮಂಟಪದ ಬಳಿ ಇರುವ ಟಿಪ್ಪು ವೃತ್ತದ ಬಳಿಯ ಬಡೆ ಮಕಾನ್‌ಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಯಿತು.
ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಸಂಸದ ಸುನೀಲ್ ಬೋಸ್, ಮಾಜಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸಾಹಿತಿಗಳಾದ ದೇವನೂರು ಮಹಾದೇವ, ಪತ್ನಿ ಪ್ರೊ.ಸುಮಿತ್ರ ಬಾಯಿ, , ಪ್ರೊ.ಅರವಿಂದ ಮಾಲಗತ್ತಿ, ರತಿರಾವ್, ಪ್ರೊ.ಲೋಲಾಕ್ಷಿ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ಕಾನೂನು ವಿ.ವಿ.ವಿಶ್ರಾಂತ ಕುಲಪತಿ ಪ್ರೊ.ಈಶ್ವರ್ ಭಟ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ನಿವೃತ್ತ ಐ.ಎ.ಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ, ಮೈಸೂರು ವಿ.ವಿ ಕುಲಪತಿ ಪ್ರೊ.ಲೋಕನಾಥ್, ಕೆಎಸ್ಓಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.