ರಾಜ್ಯ ಸಾರಿಗೆ ಸಂಸ್ಥೆ ಇತಿಹಾಸದಲ್ಲೇ ಪ್ರಯಾಣ ದರ ಬಿಜೆಪಿ ಸರಕಾರ ಹೆಚ್ಚಳ ಮಾಡಿರುವಷ್ಟು ಕಾಂಗ್ರೆಸ್ ಸರಕಾರ ಮಾಡಿಲ್ಲ: ಎಂ.ಲಕ್ಷ್ಮಣ್
ಮೈಸೂರು : ರಾಜ್ಯ ಸಾರಿಗೆ ಸಂಸ್ಥೆ ಇತಿಹಾಸದಲ್ಲೇ ಪ್ರಯಾಣ ದರವನ್ನು ಬಿಜೆಪಿ ಸರಕಾರ ಹೆಚ್ಚಳ ಮಾಡಿರುವಷ್ಟು ಕಾಂಗ್ರೆಸ್ ಸರಕಾರ ಮಾಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದರೆ 2008ರಲ್ಲಿ ಶೇ.12, 2009ರಲ್ಲಿ ಶೇ.3.5 ದರ ಹೆಚ್ಚಳ ಮಾಡಿದರು. ನಂತರ 2010ರಲ್ಲೂ ಕೂಡ ಶೇ.4.76 ಹೆಚ್ಚಳ ಮಾಡಿದ್ದರು. 2011ರಲ್ಲಿ ಶೇ.6.9 ಮತ್ತು 2012ರಲ್ಲಿ ಶೇ.12ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದ್ದರು. ಹೀಗೆ ಐದು ವರ್ಷದ ಅವಧಿಯಲ್ಲಿ 8 ರಿಂದ 9 ಬಾರಿ ದರ ಹೆಚ್ಚಳ ಮಾಡಿದ್ದರು ಎಂದು ತಿಳಿಸಿದರು.
ರಾಜ್ಯದ ಸಾರಿಗೆ ಸಂಸ್ಥೆಯ ಇತಿಹಾಸದಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಿರುವುದು ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಆದರೆ 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಶೇ.12 ಪ್ರಯಾಣ ದರವನ್ನು ಹೆಚ್ಚಳ ಮಾಡಿತ್ತು ಎಂದರು.
ಕಾಂಗ್ರೆಸ್ ಸರಕಾರ 4 ವರ್ಷಗಳ ನಂತರ ಪ್ರಯಾಣದ ದರವನ್ನು ಹೆಚ್ಚಳ ಮಾಡುತ್ತಿದೆ. ಶ್ರೀರಾಮುಲು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡಿದ್ದರು. ನಂತರ ಬಿಜೆಪಿ ಅವರು ಹೆಸ್ಮಾ ಜಾರಿಗೆ ಮಾಡಿ 3 ಸಾವಿರ ನೌಕರರನ್ನು ವಜಾ ಮಾಡಿದ್ದರು. ಆ ನೌಕರರು ಇಂದಿಗೂ ಕೋರ್ಟ್ ಗೆ ಅಲೆಯುತ್ತಿದ್ದಾರೆ ಎಂದರು.
ಬಿಜೆಪಿ ಅಧಿಕಾರದಿಂದ ಇಳಿಯುವಾಗ 4 ನಿಗಮಗಳ ಮೇಲೆ 5,900 ಕೋಟಿ ಸಾಲವನ್ನು ಮಾಡಿ ಹೋಗಿದೆ. ಕಾಂಗ್ರೆಸ್ ಸರಕಾರ ಇಲ್ಲಿಯವರೆಗೆ ಶಕ್ತಿ ಯೋಜನಯಡಿ 4 ನಿಗಮಗಳಿಗೆ ಒಟ್ಟು 6543 ಕೋಟಿಯನ್ನು ಬಿಡುಗಡೆ ಮಾಡಿದ್ದೇವೆ. ನೌಕರರ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಧ್ಯಮ ವಕ್ತಾರ ಕೆ. ಮಹೇಶ್, ಸೇವಾದಳದ ಗಿರೀಶ್ ಪಾಲ್ಗೊಂಡಿದ್ದರು.