ಮೈಸೂರಿನ ಪ್ರಮುಖ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ತೀರ್ಮಾನ : ಪರ-ವಿರೋಧ ಚರ್ಚೆ
ಮೈಸೂರು : ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹೆಸರಿಡುವ ಪಾಲಿಕೆಯ ತೀರ್ಮಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ಸೂಚಿಸಿದ್ದಾರೆ.
ಮೈಸೂರಿನ ಒಂಟಿಕೊಪ್ಪಲ್ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಿಂದ ಹೊರವರ್ತುಲ ರಸ್ತೆ ಜಂಕ್ಷನ್ ವರೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡಲು ಪಾಲಿಕೆ ನಿರ್ಧರಿಸಿದ್ದು, ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ತಿಳಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.
ಇದಕ್ಕೆ ಕೆಲ ಪರಿಸರವಾದಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಜೆಡಿಎಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, "ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಎರಡು ಬಾರಿ ಸಿಎಂ ಆಗಿದ್ದಾರೆ. ಮೈಸೂರಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ. ಅವರ ಹೆಸರಿಡುವುದು ತಪ್ಪಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ಮಾಡಬಾರದು. ಇದಕ್ಕೆ ವಿರೋಧ ಮಾಡುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ" ಎಂದು ಹೇಳಿದ್ದಾರೆ.
"ಸಿದ್ದರಾಮಯ್ಯ ಹೆಸರಿಡುವ ಪ್ರಸ್ತಾವನೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನವರು ಯಾರೂ ವಿರೋಧ ಮಾಡಬಾರದು. ಕವಿಗಳು, ಸಾಧಕರ ಹೆಸರು ಇಡುವುದು ವಾಡಿಕೆ. ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಇದೆ. ಜಯದೇವ ಅಸ್ಪತ್ರೆ ಕಟ್ಟಲು ಮಾಜಿ ಶಾಸಕ ವಾಸಣ್ಣ ಹಾಗೂ ಸಿದ್ದರಾಮಯ್ಯನವರ ಕೊಡುಗೆ ದೊಡ್ಡದು. 40 ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ. ಸಾಧಕರನ್ನು ಗುರುತಿಸುವ ವಿಚಾರದಲ್ಲಿ ಪಕ್ಷ ಭೇದ ಬೇಡ. ಸಾಧನೆಗೆ ಪಕ್ಷ ತರಬೇಡಿ" ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.