ಯಾವ ಪುರುಷಾರ್ಥಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೀರಿ : ವಾಟಾಳ್ ನಾಗರಾಜ್ ವಾಗ್ದಾಳಿ
ಮೈಸೂರು : ಸಕ್ಕರೆ ನಗರಿ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಉದ್ಘಾಟನೆಯಾಗಿದ್ದು, ಮೂರು ದಿನಗಳ ಕಾಲ ಅಕ್ಷರ ಜಾತ್ರೆ ನಡೆಯಲಿದೆ. ಆದರೆ ಈ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಟೀಕೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಪುರುಷಾರ್ಥಕ್ಕೆ ಮಾಡ್ತಿದ್ದಾರೋ ಗೊತ್ತಿಲ್ಲ. ಸಾಹಿತ್ಯ ಸಮ್ಮೇಳನದಿಂದ ಏನು ಬದಲಾವಣೆ ಆಗಿಲ್ಲ. ಕನ್ನಡ ಸಾಹಿತ್ಯ ಪರಿಷತ್ ವರ್ಷವೆಲ್ಲವೂ ಕುಂಭಕರ್ಣನಂತೆ ನಿದ್ರೆ ಮಾಡುತ್ತದೆ. ವರ್ಷಕ್ಕೆ ಒಮ್ಮೆ ಎದ್ದಾಗ ಸಾಹಿತ್ಯ ಸಮ್ಮೇಳನ ಮಾಡುತ್ತಾರೆ. ಕನ್ನಡಕ್ಕಾಗಿ ಯಾವತ್ತಾದ್ರೂ ಇವರು ಹೋರಾಟ ಮಾಡಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.
ಸಾಹಿತ್ಯ ಸಮ್ಮೇಳನ ರಾಜಕೀಯ ಹಾಗೂ ಸರ್ಕಾರಿ ಕಾರ್ಯಕ್ರಮ ಆಗುತ್ತಿದೆ. ಇದಕ್ಕೆ ನಮ್ಮ ತಕರಾರು ಏನಿಲ್ಲ. ಕನ್ನಡಿಗರು ಒಂದೆಡೆ ಕಣ್ಣೀರು ಹಾಕ್ತಿದ್ದಾರೆ. ಮತ್ತೊಂದೆಡೆ ನೀವು ಹಬ್ಬ ಆಚರಣೆ ಮಾಡಿತ್ತಿದ್ದಿರಾ. ಸಾಹಿತ್ಯ ಸಮ್ಮೇಳನ ಆಚರಣೆ ಇಲ್ಲಿಗೆ ನಿಲ್ಲಲಿ. ಸಮಗ್ರ ಕನ್ನಡಿಗರ ಬೇಡಿಕೆಗಾಗಿ ಸಾಹಿತಿಗಳು ಚಳುವಳಿಗೆ ಬರುತ್ತೀರಾ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಐಟಿ, ಬಿಟಿಗೆ ಹೆದರಿ ಸರೋಜಿನಿ ಮಹಿಷಿ ವರದಿ ಜಾರಿ ಮಾಡಲಿಲ್ಲ. ಕನ್ನಡ ಬಾವುಟ ಹುಟ್ಟಿದ ಬಗ್ಗೆ ನಿಮಗೆ ಗೊತ್ತಾ.? ನಿಮ್ಮ ಸಮ್ಮೇಳನ ನಿಮಗೆ ಇರಲಿ. ನಮ್ಮ ಹೋರಾಟ ನಮಗೆ ಇರಲಿ ಎಂದು ವಾಟಾಳ್ ನಾಗರಾಜ್ ಹೇಳಿದರು.