ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ: ಪ್ರತಾಪ್ ಸಿಂಹ
ಮೈಸೂರು: ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನ ಶಂಕರಮಠದಲ್ಲಿ ಶುಕ್ರವಾರ ಹನುಮಜಯಂತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಬಳಿಕ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದರು.
ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರ ಕೈ ಕೆಳಗೆ ಕೆಲಸ ಮಾಡುವ ಒಬ್ಬರನ್ನು ಅವರ ವಿರುದ್ಧ ಚುನಾವಣೆಗೆ ನಿಲ್ಲಿಸಿ ಸೋಲಿಸಿತು. ಈಗ ಯಾವ ಮುಖ ಇಟ್ಟುಕೊಂಡು ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತೆ?. ಈಗ ದಲಿತ ಸಮುದಾಯದ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ಬಿಜೆಪಿ ಬೆಂಬಲಿತ ಸರ್ಕಾರ. ಅದೇ ಕಾಂಗ್ರೆಸ್ ತಮ್ಮ ಕುಟುಂಬದವರಿಗೆ ಅವರೇ ಭಾರತ ರತ್ನ ಕೊಟ್ಟುಕೊಂಡರು. ಅಂಬೇಡ್ಕರ್ ಓಡಾಡಿದ ಜಾಗವನ್ನು ಪಂಚಪೀಠ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.
ಸಿಟಿ ರವಿ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ನನಗೂ ಇದೇ ರೀತಿಯ ಅನುಭವ ಆಗಿತ್ತು. ಹನುಮ ಜಯಂತಿ ಸಂದರ್ಭದಲ್ಲಿ ನನ್ನನ್ನು ಬಂಧಿಸಿ ಹಿಂಸೆ ಕೊಟ್ಟರು. ಸಂಬಂಧವಿಲ್ಲದೆ ಮರಗಳ್ಳ ಎಂದು ನನ್ನ ತಮ್ಮನನ್ನು ಬಂಧಿಸಿದರೂ ನ್ಯಾಯಾಲಯ ಜಾಮೀನು ನೀಡಿತು. ಆತನ ತಪ್ಪೇ ಇರಲಿಲ್ಲ. ಈಗ ಸಿಟಿ ರವಿ ಬಂಧನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಏನೇ ತಪ್ಪು ಆದರೂ ಸಭಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಅದನ್ನು ಬಿಟ್ಟು ಈ ರೀತಿ ಮಾಡೋದು ಸರಿಯಲ್ಲ. ಮಾತಿನ ಭರದಲ್ಲಿ ಜಟಾಪಟಿ ಸಹಜ. ಒಂದು ವೇಳೆ ಕೆಟ್ಟ ಪದ ಬಳಸಿದ್ದರೆ. ಫಾರಿನ್ಸಿಕ್ ವರದಿನಲ್ಲಿ ಗೊತ್ತಾಗುತ್ತದೆ. ಬಳಿಕ ಸ್ಪೀಕರ್ ಕ್ರಮ ತೆಗೆದುಕೊಳ್ಳುತ್ತಾರೆ. ಕ್ಷಮೆ ಕೇಳಬೇಕಾದರೂ ಕೇಳುತ್ತಾರೆ ಎಂದರು.