ಮೈಸೂರು | ಕೇಂದ್ರ ಸಚಿವ ಅಮಿತ್ ಶಾ ಗಡಿಪಾರು ಮಾಡಿ : ದಸಂಸ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Update: 2024-12-20 17:56 GMT

ಮೈಸೂರು : ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಅಶೋಕಪುರಂ ಆದಿಕರ್ನಾಟಕ ಮಹಾಸಂಸ್ಥೆ, ಯುವಸಂಘಟನೆಗಳ ಒಕ್ಕೂಟ,ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.

ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಕಾರ್ಯಕರ್ತರು ಕೇಂದ್ರಸರ್ಕಾರ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮಹಾಪೌರ ಪುರುಷೋತ್ತಮ್ ಮಾತನಾಡಿ, ದೇಶದಲ್ಲಿ ಕೋಮುವಾದದ ರಾಜಕಾರಣ ಮಾಡುತ್ತಿರುವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ದೇಶದಿಂದಲೇ ಗಡೀಪಾರು ಮಾಡಬೇಕು. ಅಂಬೇಡ್ಕರ್ ಅವರನ್ನು ಇಡೀ ಜಗತ್ತು ಕೊಂಡಾಡುತ್ತಿದ್ದರೂ ಅಮಿತ್‌ ಶಾ ಅಪಮಾನಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.

ದೇಶದ ಸಾರ್ವಭೌಮ ಸಂಸತ್‌ನಲ್ಲಿ ಅಂಬೇಡ್ಕರ್ ಅವರ ಸಾಧನೆಗಳನ್ನು ಹೇಳುವ ಬದಲಿಗೆ ಲೇವಡಿ ಮಾಡಿದ್ದಾರೆ. ಅಂಬೇಡ್ಕರ್ ನಮಗೆ ಬದುಕು ಮತ್ತು ದಾರಿದೀಪ. ದೇವರನ್ನು ಸ್ಮರಣೆಮಾಡುವುದಕ್ಕಿಂತ ನಾವು ಅಂಬೇಡ್ಕರ್‌ ಸ್ಮರಣೆ ಮಾಡಿಯೇ ಜೀವನ ಮಾಡುತ್ತಿರುವುದು. ದಲಿತರ ಮನಸ್ಸಿಗೆ ನೋವುಂಟು ಮಾಡಿರುವ ಅಮಿತ್ ಶಾ ರಾಜಕೀಯದಲ್ಲಿ ಮುಂದುವರಿಯಬಾರದು. ತಕ್ಷಣವೇ ರಾಜೀನಾಮೆ ಕೊಡಬೇಕು ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಅಂಬೇಡ್ಕರ್ ಅವರು ನಮಗೆ ಬದುಕು ಕೊಟ್ಟ ತಂದೆ. ದಲಿತರು, ಹಿಂದುಳಿದ ವರ್ಗಗಳು ಒಂದಾಗಬೇಕಿದೆ. ಸಂವಿಧಾನದ ಬೇರನ್ನು ಅಲುಗಾಡಿಸಲು ಒಂದೊಂದು ಕಂಬವನ್ನು ಕಿತ್ತು ಹಾಕುತ್ತಿರುವ ಬಿಜೆಪಿ ನಾಯಕರ ಹುನ್ನಾರವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.

ಅಮಿತ್‌ ಶಾ ಅವರಿಗೆ ಅಂಬೇಡ್ಕರ್ ಅವರ ಮೇಲೆ ಇರುವ ಅಸೂಯೆಯನ್ನು ಹೇಳಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸುತ್ತಿರುವ ಅಮಿತ್‌ ಶಾರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಎಚ್.ವಾಸು ಮಾತನಾಡಿ,ದಲಿತರ ವಿಚಾರದಲ್ಲಿ ಬಿಜೆಪಿ ಮೊದಲಿನಿಂದಲೂ ವಿರೋಧಿಯಾಗಿ ನಡೆದುಕೊಂಡು ಬಂದಿದೆ. ಅಮಿತ್ ಶಾ ನೀಡಿರುವ ಹೇಳಿಕೆಯ ಹಿಂದೆ ಆರ್‌ಎಸ್ ಎಸ್ ಅಜೆಂಡಾ ಹೊರ ಬರುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟಮೆಯಲ್ಲಿ ಅಶೋಕಪುರಂ ರಾಜು, ವಿ.ರಾಮಸ್ವಾಮಿ, ರವಿ,ದ್ಯಾವಪ್ಪನಾಯಕ, ಸಿದ್ದರಾಜು, ರಾಜೇಶ್ ಮಾತನಾಡಿದರು ಆದಿಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಪಿ.ಸಿದ್ದರಾಜು, ಉಪಾಧ್ಯಕ್ಷ ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ರಾಜು, ಲೇಖಕ ಸಿದ್ಧಸ್ವಾಮಿ, ಸಹಕಾರ್ಯದರ್ಶಿ ಜೆ.ಜಯಕುಮಾರ್, ಖಜಾಂಚಿ ಸಿ.ಕೃಷ್ಣಮೂರ್ತಿ, ಸಲಹೆಗಾರ ಮಹಾಲಿಂಗಯ್ಯ, ನಗರಪಾಲಿಕೆ ಮಾಜಿ ಸದಸ್ಯೆ ಪಲ್ಲವಿಬೇಗಂ ಮತ್ತಿತರರು ಪಾಲ್ಗೊಂಡಿದ್ದರು.

ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ನಜರ್‌ಬಾದ್ ಠಾಣೆ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News