ಸಂವಿಧಾನ ಜಾರಿಗೊಂಡಾಗ ವಿರೋಧಿಸಿದವರು ಇಂದು ಎದೆಗಪ್ಪಿಕೊಂಡು ಮೆರೆಯುತ್ತಿದ್ದಾರೆ : ದಿನೇಶ್ ಅಮೀನ್ ಮಟ್ಟು
ಮೈಸೂರು : ಸಂವಿಧಾನ ಜಾರಿಗೊಂಡ 74 ವರ್ಷಗಳ ನಂತರವೂ ದೇಶದಲ್ಲಿ ಸಂವಿಧಾನ ಉಳಿವಿನ ಅಭಿಯಾನ ಯಾಕೆ ನಡೆಯುತ್ತಿದೆ. ನಮ್ಮ ಸಂವಿಧಾನ ಬಹಳ ಸುರಕ್ಷಿತವಾಗಿದೆಯೇ? ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟಿನಲ್ಲಿ ಗಂಭೀರ ಸ್ವರೂಪದ ಆರೋಪಗಳಿರುವ 243 ಸಂಸದರಿದ್ದಾರೆ. ಯಾವುದೇ ಚರ್ಚೆಯಾಗದೇ ಸರ್ವಾಧಿಕಾರಿಯಂತೆ ಬಿಲ್ ಪಾಸ್ ಮಾಡಲಾಗುತ್ತಿದೆ. ನ್ಯಾಯಾಂಗದ ತೀರ್ಪುಗಳು ಭರವಸೆ ಕಳೆದುಕೊಳ್ಳುವಂತೆ ಮಾಡಿದೆ. ಜಾಮೀನು ನೀಡದಿರುವ ಪೋಕ್ಸೊ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಒಳಗಿಂದಲೇ ಸಂವಿಧಾನವನ್ನು ಕೊರೆಯಲಾಗುತ್ತಿದೆ ಎಂದರು.
ಸಂವಿಧಾನ ಜಾರಿಗೊಂಡಾಗ ವಿರೋಧಿಸಿದವರು ಇಂದು ಎದೆಗಪ್ಪಿಕೊಂಡು ಮೆರೆಯುತ್ತಿದ್ದಾರೆ. ಈ ಸಂದರ್ಭವನ್ನು ಯಾವ ರೀತಿ ಎದುರಿಸಬೇಕು. ಮಠದ ಶ್ರೀಗಳು ನಮ್ಮನ್ನು ಗೌರವಿಸುವ ಸಂವಿಧಾನ ಬೇಕು. ಸ್ವಾತಂತ್ರ‍್ಯ ಪೂರ್ವದಲ್ಲಿದ್ದ ಸಂವಿಧಾನ ಬೇಕು ಎನ್ನುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಅಲಿಖಿತ ಸಂವಿಧಾನ ಬರಬೇಕೆಂಬ ಆಸೆ ಇರುವಂತಿದೆ ಎಂದರು.
ಸಂವಿಧಾನ ರಕ್ಷಕರಾದ ರಾಜ್ಯಪಾಲರು ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಬರಲಿಲ್ಲ. ರಾಹುಲ್ ಗಾಂಧಿ ಅವರು ತಮ್ಮ ಮೊಬೈಲ್, ಪರ್ಸ್ ಮರೆತರು, ಸಂವಿಧಾನದ ಪ್ರತಿಯನ್ನು ಮರೆತಿಲ್ಲ. ಪ್ರಿಯಾಂಕಾ ಗಾಂಧಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನ ಪ್ರತಿ ಹಿಡಿದಿದ್ದರು. ಆದರೆ, ಕಾಂಗ್ರೆಸ್ ನಾಯಕರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ಬರಲಿಲ್ಲ ಎಂದರು.
ಅಂಬೇಡ್ಕರ್ ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಅರಿತು ಕೊನೆಯದಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ವರ್ಣಾಶ್ರಮ ವ್ಯವಸ್ಥೆ ವಿರುದ್ಧ ದೀರ್ಘಕಾಲ ಹೋರಾಟ ಮಾಡಿದರು. ಇವತ್ತಿನ ಪತ್ರಿಕೆಯಲ್ಲಿ ಚಿಕ್ಕಮಗಳೂರಿನ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ. 16 ನಿಮಿಷಕ್ಕೆ ಒಂದು ದಲಿತರ ಮೇಲೆ ದೌರ್ಜನ್ಯವಾಗುತ್ತಿದೆ. ನಾಲ್ವರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ ಎಂದರು.
ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಸಿತು ಎಂಬುದರಲ್ಲಿ ಹುರುಳಿಲ್ಲ. ಭಾರತ ರತ್ನ ಕೊಡದಿದ್ದು, ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಜಾಗ ಕೊಡಬೇಕಿತ್ತು. ಅಂಬೇಡ್ಕರ್ ಅವರ ಚುನಾವಣೆ ಸೋಲಿಗೆ ಕಾಂಗ್ರೆಸ್ ಮಾತ್ರವಲ್ಲ, ಜನಸಂಘ, ಕಮ್ಯುನಿಸ್ಟ್ ಪಕ್ಷಗಳು ಕಾರಣವಾಗಿವೆ. ಆದರೆ, ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಭಿನ್ನಾಭಿಪ್ರಾಯ ಇದಿದ್ದರೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುತ್ತಿರಲಿಲ್ಲ. ಅವರು ಬರೆದ ಸಂವಿಧಾನವನ್ನು ಅಕ್ಷರಸಃ ಒಪ್ಪಿ ಅನುಷ್ಠಾನ ಮಾಡಿದ್ದು ಕಾಂಗ್ರೆಸ್ ಎಂದರು.
ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ವಿಜಯ್ ಕುಮಾರ್ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ. ವಕ್ತಾರ ಎಂ.ಲಕ್ಷ್ಮಣ್, ಮಾಜಿ ಶಾಸಕ ಭಾರತೀ ಶಂಕರ್, ಮುಖಂಡರಾದ ಶಿವಪ್ರಸಾದ್, ಎನ್. ಭಾಸ್ಕರ್, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಹೆಡತಲೆ ಮಂಜುನಾಥ್, ಶ್ರೀರಂಗ, ವಿ.ರಾಮಸ್ವಾಮಿ, ಪ್ರೊ.ಶಿವಕುಮಾರ್, ವಾಸು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಹೇಮಂತ್ ಕುಮಾರ್, ಕೆ. ಮಹೇಶ್ ಭಾಗವಹಿಸಿದ್ದರು. ನಗರ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೆ.ರಮೇಶ್ ಸ್ವಾಗತಿಸಿದರು. ಈಶ್ವರ್ ಚಕ್ಕಡಿ ನಿರೂಪಿಸಿದರು.