ಪ್ರಿನ್ಸಸ್ ರಸ್ತೆಗೆ ಸಂಬಂಧಿಸಿದ ಜ್ಞಾಪನಾ ಪತ್ರವನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಸಂಸದ ಯದುವೀರ್
ಮೈಸೂರು : ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರನ್ನು ನಾಮಕರಣ ಮಾಡುವ ವಿಚಾರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಸಂಸದ ಯದುವೀರ್ ಒಡೆಯರ್ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ʼಪ್ರಿನ್ಸಸ್ ರಸ್ತೆʼ ಎಂಬ ದಾಖಲೆಗಳ ಜ್ಞಾಪನಾ ಪತ್ರವನ್ನು ಸಲ್ಲಿಸಿದರು.
ಮೈಸೂರು ಮಹಾನಗರ ಪಾಲಿಕೆ ಕಚೇರಿಗೆ ಗುರುವಾರ ಸಂಜೆ ಮೈಸೂರು-ಕೊಡಗು ಸಂಸದ ಯದಯವೀರ್ ನೇತೃತ್ವದ ನಿಯೋಗ ಆಗಮಿಸಿ, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಅವರಿಗೆ ಪ್ರಿನ್ಸಸ್ ರಸ್ತೆ ಎಂಬ ದಾಖಲಾತಿಗಳನ್ನು ನೀಡಿ ಕೆಆರ್‌ಎಸ್ ರಸ್ತೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂಬ ಹೆಸರಿಡುವುದು ಬೇಡ ಎಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಸಂಸದ ಯದುವೀರ್, ʼಮೈಸೂರು ಮಹರಾಜರು ಕೃಷ್ಣರಾಜಮ್ಮಣಿ ಅವರ ನೆನೆಪಿಗಾಗಿ ಟಿ.ಬಿ.ಆಸ್ಪತ್ರೆ ಕಟ್ಟಿಸಿದ್ದರು. ಅಂದಿನ ಮೈಸೂರು ಅರಮನೆ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಪಿಕೆಟಿಬಿ ಆಸ್ಪತ್ರೆ ಇರುವ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ಪ್ರವಾಸಿ ನಕ್ಷೆಯಲ್ಲೂ ಪ್ರಿನ್ಸಸ್ ರಸ್ತೆ ಎಂಬ ದಾಖಲೆ ಇದೆ. ಆಧಾರ್ ಕಾರ್ಡ್‌ಗಳಲ್ಲೂ ಈ ಹೆಸರೇ ಉಲ್ಲೇಖವಾಗಿದೆ. ಹಾಗಾಗಿ ಆ ರಸ್ತೆಗೆ ಮತ್ತೊಂದು ಹೆಸರು ನಾಮಕರಣ ಮಾಡುವುದು ಸರಿಯಲ್ಲ. ನಿಮ್ಮ ಬಳಿ ದಾಖಲೆಗಳಿಲ್ಲಿದಿದ್ದರೆ ಈ ದಾಖಲೆಗಳನ್ನು ಪರಿಶೀಲನೆ ಮಾಡಬಹುದುʼ ಎಂದು ಹೇಳಿದರು.
ʼನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿರುವುದು ನಮಗೂ ಹೆಮ್ಮೆ ಇದೆ. ಅವರ ಬಗ್ಗೆ ಅಪಾರ ಗೌರವವೂ ಇದೆ. ಹಾಗಾಗಿ ಆ ರಸ್ತೆ ಬಿಟ್ಟು ಬೇರೆ ಎಲ್ಲಾದರೂ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡಿʼ ಎಂದು ಮನವಿ ಮಾಡಿದರು.