ಮೈಸೂರಿನ ಕೆಆರ್‌ಎಸ್ ರಸ್ತೆಗೆ ʼಸಿದ್ದರಾಮಯ್ಯ ಆರೋಗ್ಯ ಮಾರ್ಗʼ ಎಂದು ಹೆಸರಿಡುವುದು ಶತಸಿದ್ಧ : ಶಾಸಕ ಕೆ.ಹರೀಶ್ ಗೌಡ
ಮೈಸೂರು : "ಮೈಸೂರಿನ ಕೆಆರ್‌ಎಸ್(ಪ್ರಿನ್ಸಸ್) ರಸ್ತೆಗೆ ʼಸಿದ್ದರಾಮಯ್ಯ ಆರೋಗ್ಯ ಮಾರ್ಗʼ ಎಂಬ ಹೆಸರನ್ನು ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದರೂ ನಾವು ಅವರ ಹೆಸರನ್ನು ಇಡುವುದು ಶತಸಿದ್ಧ" ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.
ಮೈಸೂರು ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೈಸೂರಿನ ರಾಜರು ಮತ್ತು ರಾಜಮನೆತನದ ಬಗ್ಗೆ ನಮಗೆ ಗೌರವವಿದೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ನಂತರ ಮೈಸೂರಿನ ಅಭಿವೃದ್ದಿಗೆ ಶ್ರಮಿಸಿದವರ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಕೆಆರ್‌ಎಸ್(ಪ್ರಿನ್ಸಸ್) ರಸ್ತೆಯಲ್ಲಿ ಆರೋಗ್ಯ ಸಮುಚ್ಚಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗೆ ʼಸಿದ್ದರಾಮಯ್ಯ ಆರೋಗ್ಯ ಮಾರ್ಗʼ ಎಂದು ಹೆಸರಿಡುವುದು ಶತಸಿದ್ಧ" ಎಂದರು.
ರಸ್ತೆಗೆ ಹೆಸರಿಡುವ ಕುರಿತ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು, ʼಬಿಜೆಪಿಯವರ ಬುದ್ದಿ ಎಲ್ಲರಿಗೂ ಗೊತ್ತಿದೆ. ಅವರು ಗಾಂಧಿಯನ್ನು ಒಪ್ಪುವುದಿಲ್ಲ. ನಾಥುರಾಮ್ ಗೋಡ್ಸೆಯನ್ನು ಮಹಾತ್ಮ ಎಂದು ಹೇಳುತ್ತಾರೆ. ಅವರಿಗೆ ನಾವು ಏನು ಹೇಳಲು ಸಾಧ್ಯವಿಲ್ಲ. ಈಗಾಗಲೇ ಈ ರಸ್ತೆಗೆ ಹೆಸರಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಯಾವುದೇ ಸರಕಾರಿ ದಾಖಲೆಗಳಲ್ಲಿ ಪ್ರಿನ್ಸಸ್ ರಸ್ತೆ ಎಂಬುದು ಇಲ್ಲ. ಅದನ್ನು ಕೆಆರ್‌ಎಸ್ ಅಥವಾ ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ರಸ್ತೆ ಎಂದು ಲೋಕ ರೂಢಿಯಾಗಿ ಕರೆಯುತ್ತಾರೆ. ನಿರ್ದಿಷ್ಟ ಹೆಸರು ಇಲ್ಲʼ ಎಂದು ತಿಳಿಸಿದರು.
ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಈ ರಸ್ತೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಟ್ರಾಮ್ ಕೇರ್ ಸೆಂಟರ್, ಪಂಚ ಚರಕ ಆಸ್ಪತ್ರೆ, ಕಿದ್ವಾಯಿ ಸೇವೆ ನಡೆಯುತ್ತಿದೆ. ಈಗ ನೆಫ್ರಾಲಜಿ ಕೇಂದ್ರಕ್ಕೆ ಅನುಮೋದನೆ ನೀಡಿದ್ದಾರೆ. ಮೈಸೂರು ಸುತ್ತ ಮುತ್ತಲಿನ ಐದು ಜಿಲ್ಲೆಗಳ ಜನರಿಗೂ ಉಪಯೋಗವಾಗುತ್ತಿದೆʼ ಎಂದರು.
ಈ ಹಿನ್ನೆಲೆಯಲ್ಲಿ ನಾನು ಪ್ರಸ್ತಾವನೆ ಸಲ್ಲಿಸಿದ್ದೇನೆ. ಯಾರು ಎಷ್ಟೇ ವಿರೋಧ ಮಾಡಿದರೂ ಸಿದ್ದರಾಮಯ್ಯ ಅವರ ಹಸರು ಇಡುತ್ತೇನೆ ಎಂದು ತಿಳಿಸಿದರು.