ʼಗ್ಯಾರಂಟಿʼಗಳನ್ನು ನಿಲ್ಲಿಸಲು ಕಾಂಗ್ರೆಸ್ ಸರಕಾರ ನೆಪ ಹುಡುಕುತ್ತಿದೆ : ಎಚ್‌ಡಿಕೆ
ಮೈಸೂರು : ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ನಿಲ್ಲಿಸಲು ಕಾರಣವನ್ನು ಹುಡುಕುತ್ತಿದೆ. ಹೇಗಾದರೂ ಮಾಡಿ ಗ್ಯಾರಂಟಿ ನಿಲ್ಲಿಸಲು ನೆಪ ಹುಡುಕುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೂರಿದರು.
ಸರಕಾರಿ ಬಸ್ ಪ್ರಯಾಣ ದರವನ್ನು ಒಮ್ಮೆಲೇ ಶೇ.15ರಷ್ಟು ಏರಿಕೆ ಮಾಡಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ 5 ಗ್ಯಾರಂಟಿಗಳನ್ನು ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ನೀವೇ ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಮತ ಕೊಟ್ಟು ಅಧಿಕಾರ ನೀಡಿದ ಜನರಿಂದ ಅವುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜತೆ ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಅತ್ತೆಯದನ್ನು ಅಳಿಯ ದಾನ ಮಾಡಿದ ಎನ್ನುವ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡುವುದಕ್ಕೆ ಇವರೇ ಆಗಬೇಕಾ? ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮನ್ಯರಿಗೆ ಹೊರೆಯಾಗಲಿದೆ. ಯಾವುದೇ ಮಂತ್ರಿಯ ಮಕ್ಕಳು, ಶಾಸಕರ ಮಕ್ಕಳು ಸರಕಾರಿ ಬಸ್ ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನ ಸಾಮಾನ್ಯರು. ದಿನಕ್ಕೆ 10 ರೂಪಾಯಿ ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಡವರಿಗೆ ಮನೆ ಹಂಚಿಕೆಯಲ್ಲೂ ಲಂಚ :
ಕಾಂಗ್ರೆಸ್ ಸರಕಾರದಲ್ಲಿ ಬಡವರಿಗೆ ಮನೆ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಲಂಚದ ಪ್ರಮಾಣ ಶೇ.60 ತಲುಪಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಶೇ.60ರಷ್ಟು ಲಂಚ, ಕಮೀಶನ್ ವಸೂಲಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಬಡವರಿಗೆ ಮನೆ ಹಂಚಿಕೆಯಲ್ಲೂ ಲಂಚ ಹೊಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದರು. ಈಗ ವಿಧಾನಸೌಧದಲ್ಲಿ ಸಚಿವರೇ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವ ಜಯತೇ ಎಂದರೆ ಇದೇನಾ? ಇವರ ಸತ್ಯಮೇವ ಜಯತೆ ಬರೀ ಜಾಹೀರಾತಿಗೆ ಸೀಮಿತವಾಗಿದೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.