ಪ್ರಿನ್ಸಸ್ ರಸ್ತೆ ಹೆಸರು ಬಲಿಸುತ್ತಿಲ್ಲ, ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ರಾಯಲ್ ಇನ್ ಸರ್ಕಲ್ ವರೆಗೆ ಸಿಎಂ ಸಿದ್ದರಾಮಯ್ಯ ಹೆಸರು ಇಡಲಾಗುತ್ತಿದೆ: ಶಾಸಕ ಕೆ.ಹರೀಶ್ ಗೌಡ
ಮೈಸೂರು: ನಗರದ ದಾಸಪ್ಪ ವೃತ್ತದಿಂದ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದ ವೃತ್ತದ ವರೆಗೆ ಇರುವ ಪ್ರಿನ್ಸಸ್ ರಸ್ತೆಯ ಹೆಸರು ಬದಲಿಸುತ್ತಿಲ್ಲ. ಬದಲಿಗೆ ಅಲ್ಲಿಂದ ಮೇಟಗಳ್ಳಿಯ ರಾಯಲ್ ಇನ್ ಹೋಟೆಲ್ ವೃತ್ತದ ವರೆಗಿನ ರಸ್ತೆಗೆ ಮಾತ್ರ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ವೃತ್ತದಿಂದ ಮೇಟಗಳ್ಳಿ ರಾಯಲ್ ಇನ್ ಹೋಟೆಲ್ ವೃತ್ತದ ವರೆಗಿನ ರಸ್ತೆಗೆ ಯಾವುದೇ ಹೆಸರು ಇಟ್ಟಿಲ್ಲ. ಲೋಕಾರೂಢಿಯಲ್ಲಿ ಕೆ.ಆರ್.ರಸ್ತೆ ಎಂದು ಜನರು ಕರೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ, ಸಾಧನೆ ಸ್ಮರಣಾರ್ಥ ಅವರ ಹೆಸರು ಇಡಲು ಪಾಲಿಕೆ ಆಡಳಿತಾಧಿಕಾರಿ ಜಿಲ್ಲಾಧಿಕಾರಿಗೆ ನವೆಂಬರ್ 12ರಂದು ಮನವಿ ಸಲ್ಲಿಸಿದೆ. ಅಂತೆಯೇ ಕೌನ್ಸಿಲ್ ಸಭೆಯಲ್ಲಿ ಕರೆದು ನಿರ್ಣಯ ತೆಗೆದುಕೊಂಡು ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ, ಇದಕ್ಕೆ ವಿರೋಧ ಸಲ್ಲದು ಎಂದು ಹೇಳಿದರು.
ಈ ಕುರಿತು ರಾಜವಂಶಸ್ಥ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಮುಖಂಡರೊಂದಿಗೆ ಅವರು ಕರೆದ ಕಡೆಗೆ ದಾಖಲೆ ಸಹಿತ ಹೋಗಿ ವಿಷಯವನ್ನು ಮನವರಿಕೆ ಮಾಡಿಕೊಡಲು ಸಿದ್ಧ ಎಂದು ಹೇಳಿದರು.
ಯದುವಂಶದ ಕುರಿತು ಗೌರವ, ಅಭಿಮಾನ ಇದೆ. ಹೀಗಾಗಿ, ಪ್ರಿನ್ಸಸ್ ರಸ್ತೆ ಹೆಸರು ತೆಗೆದುಹಾಕುವ ಕೆಟ್ಟ ಆಲೋಚನೆಯೂ ಇಲ್ಲ. ಈ ಕೆಲಸವನ್ನು ಯಾರೇ ಮುಂದಾದರೂ ಅದಕ್ಕೆ ನಾನೇ ಮೊದಲು ವಿರೋಧಿಸುವೆ. ಆದರೆ, ಈ ಕುರಿತು ತಪ್ಪು ಮಾಹಿತಿಯಿಂದ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಇದನ್ನು ರಾಜಕೀಯ ದುರುದ್ದೇಶಕ್ಕೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಆಗಬಾರದು ಎಂದರು.
ಕಾಂಗ್ರೆಸ್ ಕಚೇರಿ ಬಳಿಯ ದಾಸಪ್ಪ ವೃತ್ತದಿಂದ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದ ವರೆಗೆ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಹೆಸರಿರುವುದಕ್ಕೆ ದಾಖಲೆ ಇದೆ. 1930ರಲ್ಲೇ ಈ ಹೆಸರಿಡಲಾಗಿದೆ. ಆದರೆ, ಅಲ್ಲಿಯಿಂದ ಮೇಟಗಳ್ಳಿಯ ರಾಯಲ್ ಇನ್ ಹೋಟೆಲ್ ವೃತ್ತದ ವರೆಗಿನ ರಸ್ತೆಗೆ ನಾಮಕರಣ ಮಾಡಿಲ್ಲ ಎಂಬುದಕ್ಕೂ ದಾಖಲೆಗಳಿವೆ. 1997, 2016ರ ಮುಡಾ ನಕ್ಷೆಯಲ್ಲೂ ಇದು ಉಲ್ಲೇಖವಾಗಿದೆ. ಈ ಕುರಿತು ಚರ್ಚೆಗೆ ಸಿದ್ಧ ಎಂದರು.
ಹಾಲಿ ಇರುವ ಹೆಸರನ್ನು ತೆಗೆದುಹಾಕಲು ಯಾರೂ ಹೇಳುತ್ತಿಲ್ಲ. ಹೀಗಾಗಿ, ಈ ವಿವಾದ ಇಲ್ಲಿಗೆ ಅಂತ್ಯ ಆಗಲಿ ಎಂದ ಅವರು, ಯಾವುದೇ ಹೆಸರಿಲ್ಲದ ರಸ್ತೆಗೆ ಹೆಸರು ಇಡಲಾಗುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಿಳಿದಿಲ್ಲ. ಇತ್ತೀಚಿಗೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ವಿಷಯ ತಿಳಿಸಿರುವಷ್ಟೇ. ಇದರಲ್ಲಿ ಅವರ ಪಾತ್ರ ಇಲ್ಲ. ಸಿದ್ದರಾಮಯ್ಯ ಅವರು ಮಾಡಿರುವ ಸಾಧನೆ ಕಣ್ಮುಂದೆ ಇವೆ. ಹೀಗಾಗಿ, ಅವರ ಹೆಸರಿಡಲು ವಿರೋಧ ಬೇಡ ಎಂದು ಕೋರಿದರು.
`ದಾಸಪ್ಪ ವೃತ್ತದಿಂದ ಮೇಟಗಳ್ಳಿ ರಾಯಲ್ ಇನ್ ಹೋಟೆಲ್ ವರೆಗೂ ಪ್ರಿನ್ಶ್ ರಸ್ತೆ ಹೆಸರಿದೆ' ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬಿಡುಗಡೆ ಮಾಡಿರುವುದು ಅಧಿಕೃತ ದಾಖಲೆಗಳು. ಮುಡಾದ ಸಂಬಂಧಪಟ್ಟ ಅಧಿಕಾರಿಗಳ ಸಹಿ, ಸೀಲು ಇದೆ. ಇದನ್ನು ಯಾರು ಬೇಕಾದರೂ ಪರಿಶೀಲನೆ ಮಾಡಬಹುದು. ಒಂದು ವೇಳೆ, ಈ ಕುರಿತು ದಾಖಲೆ ಸಹಿತ ಸಾಬೀತು ಪಡಿಸಿ. ಅದು ರುಜುವಾತಾದರೆ ಹಿಂದೆ ಸರಿಯಲಾಗುವುದು ಎಂದು ಸವಾಲು ಹಾಕಿದರು.
ಪ್ರಿನ್ಸಸ್ ರಸ್ತೆಯಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಹೆಸರಿನ ನಾಮಫಲಕ ಇಲ್ಲ. ಆದ್ದರಿಂದ ನಾಮಫಲಕವನ್ನು ೩ ಕಡೆ ಅಳವಡಿಕೆ ಮಾಡಲಾಗುವುದು. ಜತೆಗೆ, ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಎಂ.ಶಿವಣ್ಣ, ಗಿರೀಶ್ ಸೇರಿದಂತೆ ಹಲವರು ಉಒಸ್ಥಿತರುದ್ದರು.