ಆರೋಗ್ಯ ಕ್ಷೇತ್ರದಲ್ಲಿರುವವರು ನ್ಯಾಯಪರತೆ, ಸಮಾನತೆ, ಮಾನವೀಯ ತತ್ವ ಪಾಲಿಸಬೇಕು : ಡಿ.ವೈ.ಚಂದ್ರಚೂಡ್
ಮೈಸೂರು : ಸಂವಿಧಾನವು ನ್ಯಾಯ, ಸಮಾನತೆಯನ್ನು ಎಲ್ಲಾ ನಾಗರಿಕರಿಗೂ ನೀಡಿದೆ. ಉನ್ನತ ಶಿಕ್ಷಣ ಪಡೆದವರು ಈ ಮೌಲ್ಯಗಳನ್ನು ಎತ್ತಿಹಿಡಿಯಬೇಕು’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರತಿಪಾದಿಸಿದರು.
ಬನ್ನಿಮಂಟಪದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಸಂಸ್ಥೆಯ 15ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂದರ್ಭದಲ್ಲಿ ಶೇ.20ರಷ್ಟು ಮುಂದುವರಿದ ದೇಶಗಳು ಶೇ.54ರಷ್ಟು 460 ಕೋಟಿ ಲಸಿಕೆ ತಮ್ಮದಾಗಿಸಿಕೊಂಡಿದ್ದವು. ಶೇ.47 ರಷ್ಟಿದ್ದ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಶೇ.12ರಷ್ಟು ಪ್ರಮಾಣದ ಲಸಿಕೆ ದೊರೆತಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ದೇಶದ ಎಲ್ಲರಿಗೂ ಲಸಿಕೆಯು ಉಚಿತವಾಗಿ ಸಿಗುವಂತೆ ಮಾಡಿತು’ ಎಂದು ಸ್ಮರಿಸಿದರು.
‘ಕರುಣೆ, ಮಾನವೀಯತೆ, ಉದಾರತೆ ನಾವು ಬದುಕುವ ಜಗತ್ತನ್ನು ಸುಂದರವಾಗಿ ರೂಪಿಸುತ್ತವೆ. ಆರೋಗ್ಯ ಕ್ಷೇತ್ರದಲ್ಲಿರುವವರು ನ್ಯಾಯಪರತೆ, ಸಮಾನತೆ, ಮಾನವೀಯ ತತ್ವ ಪಾಲಿಸಿ, ನೆಮ್ಮದಿಯ ನಾಳೆಗಳನ್ನು ಕಟ್ಟಬೇಕಿದೆ’ ಎಂದು ಹೇಳಿದರು.
‘ಪದವೀಧರರು ವೈಯಕ್ತಿಕ ಬೆಳವಣಿಗೆಗಿಂತಲೂ ಎಲ್ಲರ ಭವಿಷ್ಯಕ್ಕಾಗಿ ಸೇವೆ ಮಾಡಬೇಕು. ತಲೆಮಾರಿನಿಂದ ಪಡೆದ ಜ್ಞಾನ, ಅನುಭೂತಿ, ಆಶೀರ್ವಾದವನ್ನು ಮುಂದಿನ ಪೀಳಿಗೆಗೆ, ಸಮುದಾಯಕ್ಕೆ ವರ್ಗಾಯಿಸುವುದೇ ವೃತ್ತಿಪರತೆಯಾಗಿದೆ. ಈ ಮೂಲಕ ಜೀವನ ಚಕ್ರ ಪೂರೈಸಬೇಕು’ ಎಂದರು.
‘ಸಾಮಾಜಿಕ, ಆರ್ಥಿಕ ಸ್ಥಾನಮಾನ, ವ್ಯಕ್ತಿಯ ಹಿನ್ನೆಲೆ ಯಾವುದೂ ಮುಖ್ಯವಾಗಬಾರದು. ವೈದ್ಯರು, ಶುಶ್ರೂಷಕರು, ದಂತವೈದ್ಯರು, ಆಡಳಿತಾಧಿಕಾರಿಗಳು ಆರೋಗ್ಯ ಸೇವೆಯನ್ನು ಸಮಾನವಾಗಿ ನೀಡಬೇಕು. ಸೇವೆಯೇ ಪರಮೋಧರ್ಮ ಆಗಿರಬೇಕು’ ಎಂದು ಸಲಹೆ ನೀಡಿದರು.
‘ಅವಕಾಶ ಎಲ್ಲರಿಗೂ ಸಿಗಬೇಕು. ಅಂಗವಿಕಲತೆ ಕಾರಣ ವೈದ್ಯಕೀಯ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗೆ ಮರುಪರೀಕ್ಷೆಯನ್ನು ಬರೆಯುವ ಅವಕಾಶವನ್ನು ಸುಪ್ರೀಂ ಕೋರ್ಟ್ ಒದಗಿಸಿತ್ತು. ಮಾನವೀಯತೆಯಿಂದ ಪ್ರತಿಯೊಬ್ಬ ಪ್ರಜೆಯನ್ನೂ ನೋಡಬೇಕು’ ಎಂದರು.
‘ಗಾಝಾ, ಉಕ್ರೇನ್, ಆಫ್ರಿಕಾದಲ್ಲಿ ಯುದ್ಧಗಳು ನಡೆಯುತ್ತಿವೆ. ಜಾಗತಿಕ ಸವಾಲುಗಳು ಬಹಳಷ್ಟಿವೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಯುದ್ಧದಲ್ಲಿ ಜೀವ ಲೆಕ್ಕಿಸದೇ ಆರೈಕೆ ಮಾಡಿದ ಫ್ಲಾರೆನ್ಸ್ ನೈಟಿಂಗೇಲ್ ಆದರ್ಶವಾಗಬೇಕು’ ಎಂದು ಹೇಳಿದರು.
‘ತೆಲಂಗಾಣ, ಮಹಾರಾಷ್ಟ್ರ, ಅಸ್ಸಾಂ, ಕೇರಳ ಸೇರಿದಂತೆ ದೇಶದ ವಿವಿಧ ಭಾಗದ ವಿದ್ಯಾರ್ಥಿಗಳು ಪ್ರಾದೇಶಿಕ ವೈವಿಧ್ಯವಷ್ಟೇ ಅಲ್ಲ, ದೇಶವನ್ನೇ ಬೆಳಗುವ ಶಕ್ತಿಯೀಗ ಬಂದಿದೆ. ಜಗತ್ತನ್ನು ಬದಲಿಸುವ ಶಕ್ತಿಶಾಲಿ ಅಸ್ತ್ರ ಶಿಕ್ಷಣವೆಂದು ನೆಲ್ಸನ್ ಮಂಡೇಲಾ ಹೇಳಿದ್ದಾರೆ. ಹೀಗಾಗಿ, ಪ್ರತಿಯೊಬ್ಬರ ಈ ಸಾಧನೆ ವೈಯಕ್ತಿಕವಲ್ಲ, ಅದು ದೇಶದ್ದಾಗಿದೆ’ ಎಂದು ಅಭಿಪ್ರಾಯಪಟ್ಟರು.ಸಂಸ್ಥೆಯ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಮಾಣ ಬೋಧಿಸಿದರು.
ಕುಲಪತಿ ಡಾ.ಎಚ್.ಬಸವನಗೌಡಪ್ಪ, ಡಾ.ಬಿ.ಸುರೇಶ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ಕುಲಸಚಿವ ಡಾ.ಬಿ.ಮಂಜುನಾಥ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್ ಹಾಜರಿದ್ದರು.