ಮೈಸೂರು | ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಕೈದಿ ಮೃತ್ಯು; ಮೃತರ ಸಂಖ್ಯೆ ಮೂರಕ್ಕೆ ಏರಿಕೆ
ಮೈಸೂರು : ಜೈಲಿನಲ್ಲಿ ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣ ಸಂಬಂಧ ಮತ್ತೊಬ್ಬ ಕೈದಿಯೂ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಶೆಗಾಗಿ ಎಸೆನ್ಸ್ ಕುಡಿದಿದ್ದ ಮೂವರು ಕೈದಿಗಳಾದ ಚಾಮರಾಜನಗರದ ನಾಗರಾಜು, ಮೈಸೂರಿನ ಸಾತಗಳ್ಳಿಯ ಮಾದೇಶ್, ಇದೀಗ ರಮೇಶ್ ಮೃತಪಟ್ಟಿದ್ದಾರೆ.
ಹೊಸವರ್ಷದ ಹಿನ್ನೆಲೆ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದು ಮೂವರು ಕೈದಿಗಳು ಅಸ್ವಸ್ಥರಾಗಿದ್ದರು. ಮೂವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೈದಿ ಮಾದೇಶ್ ಮೃತಪಟ್ಟಿದ್ದು, ರಮೇಶ್ ಹಾಗೂ ನಾಗರಾಜ್ ಸ್ಥಿತಿ ಗಂಭೀರವಾಗಿತ್ತು. ನಂತರ ನಾಗರಾಜ್ ಸಹ ಸಾವನ್ನಪ್ಪಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೈದಿ ರಮೇಶ್ ಸಹ ಮೃತಪಟ್ಟಿದ್ದಾರೆ.
ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹೊಸವರ್ಷದ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್ ಕುಡಿದಿದ್ದರು ಎನ್ನಲಾಗಿದೆ. ಡಿ.28ರಂದು ಎಸೆನ್ಸ್ ಕುಡಿದು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ನಂತರ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೂ ಕೈದಿಗಳು ವಿಷಯ ಮುಚ್ಚಿಟ್ಟಿದ್ದರು. ವೈದ್ಯರು ಈ ಬಗ್ಗೆ ಪ್ರಶ್ನಿಸಿದಾಗ ಮೂವರು ಸತ್ಯ ಹೇಳಿದ್ದಾರೆ. ಆದರೆ ಅದಗಲೇ ಸಾಕಷ್ಟು ವಿಳಂಬವಾದ ಹಿನ್ನೆಲೆ, ಚಿಕಿತ್ಸೆ ಫಲಕಾರಿಯಾಗದೆ ಮಾದೇಶ, ನಾಗರಾಜು ಸಾವನ್ನಪ್ಪಿದ್ದು ಬುಧವಾರ ರಮೇಶ್ ಮೃತಪಟ್ಟಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.