ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದು ಸಮಾಧಾನವಿದೆ, ತೃಪ್ತಿಯಿಲ್ಲ : ಬಿ.ಆರ್.ಪಾಟೀಲ್

Update: 2024-09-18 16:04 GMT

ಕಲಬುರಗಿ : "ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಬಗ್ಗೆ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ" ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ತರಾತುರಿಯಲ್ಲಿ ಸಂಪುಟ ಸಭೆ ನಡೆದಿದ್ದರಿಂದ ಈ ಭಾಗದ ಅಭಿವೃದ್ಧಿಗೆ ಮೂಲದಲ್ಲಿ ಬೇಕಾದ ಕೊಡುಗೆಗಳನ್ನು ಕೊಡಲಾಗಿಲ್ಲ" ಎಂದು ಹೇಳಿದರು.

ನೇಮಕಾತಿ ಬಗ್ಗೆ ಸ್ಪಷ್ಟತೆಯಿಲ್ಲ:

ಈ ಭಾಗ ಅಭಿವೃದ್ಧಿ ಹೊಂದಬೇಕಾದರೆ ಮುಖ್ಯವಾಗಿ ಶೈಕ್ಷಣಿಕವಾಗಿ ಮುಂದುವರಿಯಬೇಕು. ಅದಕ್ಕಾಗಿ ಶಿಕ್ಷಕರ ನೇಮಕಾತಿ ನಡೆಯಬೇಕಾಗಿದೆ. ಈ ಕುರಿತು ಸಂಪುಟದ ನಿರ್ಣಯ ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ. ಗುಲ್ಬರ್ಗ ವಿಶ್ವ ವಿದ್ಯಾಲಯದಲ್ಲಿ ಶೇ.80 ಉಪನ್ಯಾಸಕರ ಹುದ್ದೆ ಖಾಲಿ ಇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಹೈಸ್ಕೂಲ್ ಮತ್ತು ಕಾಲೇಜುಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿತ್ತು ಎಂದರು.

ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸಲಿ :

ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳಿಗೆ ಅರಿವಿದೆ. ಅಧಿಕಾರಿಗಳಿಗೆ ಕೇವಲ ಕಾನೂನು ಮಾತ್ರ ತಿಳಿದಿದೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಸಮಸ್ಯೆ ನೀಗಿಸುತ್ತಾರೆ ಎಂದು ಹೇಳಿದರು.

ಸರಕಾರಿ ನೌಕರರ ಬಡ್ತಿ ಅನ್ಯಾಯದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು 371(ಜೆ)ಗಾಗಿ ಪ್ರತ್ಯೇಕ ಕೆಎಟಿ ಕಲಬುರಗಿಯಲ್ಲಿ ಪ್ರಾರಂಭ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ, ಅದರ ಬಗ್ಗೆಯೂ ಚರ್ಚೆ ನಡೆಸಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News