ಕಲಬುರಗಿ | ದೇಶದ ಮಹಾನ್ ಸಾಧಕರು ಓದಿದ್ದು ಸರಕಾರಿ ಶಾಲೆಯಲ್ಲೇ : ಚಂದ್ರಶೇಖರ ಪಾಟೀಲ
ಕಲಬುರಗಿ : ದೇಶದಲ್ಲಿ ಮಹೋನ್ನತ ಹುದ್ದೆಗೇರಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳು ಕೂಡ ಸರಕಾರಿ ಶಾಲೆಯಲ್ಲೇ ಓದಿದ್ದವರು ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಅಳಂದ ತಾಲೂಕು ನಿರ್ದೇಶಕರಾದ ಚಂದ್ರಶೇಖರ ಪಾಟೀಲ ಹೇಳಿದರು.
ಆಳಂದ ತಾಲ್ಲೂಕಿನ ಹಡಲಗಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ ಮಾದನ ಹಿಪ್ಪರಗಾ ರವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಫಲಿತಾಂಶ ಹೆಚ್ಚಳಕ್ಕಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಮ್ಮ ಸರಕಾರಿ ಶಾಲೆಗಳಲ್ಲಿ ಅದರಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಾನ್ ಪ್ರತಿಭೆಗಳಿದ್ದು, ಅವರು ಮುಂದೊಂದು ದಿನ ದೊಡ್ಡ ಹುದ್ದೆ ಪಡೆದು ಶಾಲೆಗೆ ಕೀರ್ತಿ ತರಬೇಕು, ಈ ಹಿಂದೆ ನಮ್ಮ ದೇಶದ ಪ್ರಸಿದ್ಧ ವಿಜ್ಞಾನಿಗಳಾದ ಡಾ.ಅಬ್ದುಲ್ ಕಲಾಂ , ಸಿವಿ ರಾಮನ್ ಅಲ್ಲದೇ ಇತ್ತೀಚಿಗೆ ದೇಶದ ಪ್ರಸಿದ್ಧ ಸಂಶೋಧನಾ ಸಂಸ್ಥೆಯಾದ ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡ ಡಾ.ನಾರಾಯಣ್ ರವರು ಕೂಡ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಓದಿದ್ದವರಾಗಿದ್ದಾರೆ. ಹಾಗಾಗಿ ನೀವು ಯಾರಿಗೂ ಕಡಿಮೆ ಇಲ್ಲ, ಶ್ರಮಪಟ್ಟು ಓದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.
ಜಿಲ್ಲಾ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಕೋದಂಪುರ, ಗಣಿತ ವಿಷಯ ಸಂಪನ್ಮೂಲ ಶಿಕ್ಷಕರಾದ ಸಿದ್ಲಿಂಗಯ್ಯ ಹಿರೇಮಠ್, ಇಂಗ್ಲೀಷ್ ವಿಷಯ ಸಂಪನ್ಮೂಲ ಶಿಕ್ಷಕರಾದ ಬಂಡಿ ಅವರು ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಸುವ ತಂತ್ರಗಳು ಮತ್ತು ಪರೀಕ್ಷೆಗೆ ತಯಾರಿ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಯಶ್ವಂತ್ ಬಸ್ತಿ, ನಾದ ಕೆಂಚಪ್ಪ ಟಿ ಆರ್.ಪಾಟೀಲ ವಿರುಪಾಕ್ಷಯ್ಯ ಸ್ವಾಮಿ, ಅರವಿಂದ ಖೈರಾಟ, ಸಂತೋಷ್ ವೇದಪಾಠಕ, ಸಂತೋಷ್ ಸಿದ್ದಾಪುರ ಸೇರಿದಂತೆ ವಲಯದ ಹಲವಾರು ಶಿಕ್ಷಕರು ಭಾಗವಹಿಸಿದ್ದರು.
ಹಡಲಗಿ, ಮಾದನ ಹಿಪ್ಪರಗಾ, ಮುದುಗುಣಕಿ ಗ್ರಾಮದ ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಮಲ್ಲಿನಾಥ್ ಪರೆಣಿ ವಹಿಸಿದ್ದರು. ಶಿಕ್ಷಕರಾದ ಅರ್ಜುನ ಅತ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.