ಕಲಬುರಗಿ | ಶಾರ್ಟ್ ಸರ್ಕ್ಯೂಟ್ : ಅಂಗಡಿ ಬೆಂಕಿಗಾಹುತಿ
ಕಲಬುರಗಿ : ಶಹಾಬಾದ್ ನಗರದ ಕನಕದಾಸ ವೃತದ ಸಮೀಪ ಜೇವರ್ಗಿ ರಸ್ತೆಯಲ್ಲಿನ ಚಿನ್ನಾಜಿ ಕಾಂಪ್ಲೆಕ್ಸ್ ನಲ್ಲಿ ಇರುವ ಬಾಲಾಜಿ ಆಟೋಮೊಬೈಲ್ಸ್ ಅಂಗಡಿಯು ವಿದ್ಯುತ್ ಸ್ಪರ್ಶದಿಂದ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಹತ್ತಿದ್ದು, ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಯಶಸ್ವಿಯಾಗಲಿಲ್ಲ, ಹಾಗಾಗಿ ಬೆಂಕಿಯ ಕೆನ್ನಾಲಗೆಯಿಂದ ಅಂಗಡಿ ಸುಟ್ಟು ಕರಕಲಾಗಿತ್ತು.
ಅಂಗಡಿಯಲ್ಲಿ ವಾಹನಕ್ಕೆ ಬಳಸುವ ಬೆಲೆಬಾಳುವ ಆಯಿಲ್ ಗಳು, ಯಂತ್ರೋಪಕರಣಗಳ ಬಿಡಿ ಭಾಗಗಳು, ಪ್ಲಾಸ್ಟಿಕ್ ಸಾಮಗ್ರಿಗಳು, ಇಂಜಿನ್ ಸಾಮಾನುಗಳು ಸಂಪೂರ್ಣವಾಗಿ ಬಸ್ಮವಾಗಿವೆ. ಚಿತ್ತಾಪುರ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸುವ ಮೊದಲೇ ಸಂಪೂರ್ಣ ಸುಟ್ಟು ಹೋಗಿತ್ತು, ಸುಮಾರು 15 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಬಾಲಾಜಿ ಆಟೋಮೊಬೈಲ್ಸ್ ಅಂಗಡಿಯ ಮಾಲಕ ಮಹಾಂತಪ್ಪ ಕುಮಸಿಕರ್ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹಾಗೂ ಸಿಬ್ಬಂದಿಯವರು ಭೇಟಿ ನೀಡಿದ್ದಾರೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.