ಕಲಬುರಗಿ | ಮಾದಕ ವಸ್ತುಗಳ ವಿರುದ್ಧ ನಗರ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ
ಕಲಬುರಗಿ : ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಸೇರಿದಂತೆ ಮತ್ತಿತರ ಅಪರಾಧ ಚಟುವಟಿಕೆಗಳ ವಿರುದ್ಧ ಕೇವಲ 9 ದಿನಗಳಲ್ಲೇ ವಿಶೇಷ ಕಾರ್ಯಾಚರಣೆಯ ಮೂಲಕ 50 ಪ್ರಕರಣಗಳನ್ನು ದಾಖಲಿಸಿ, 54 ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಜ.1ರಿಂದ 9ರವರೆಗೆ ಎನ್.ಡಿ.ಪಿಎಸ್ ಕಾಯ್ದೆಯಡಿಯಲ್ಲಿ 50 ಪ್ರಕರಣಗಳನ್ನು ದಾಖಲಿಸಿ, 613 ಗ್ರಾಂ. ಗಾಂಜಾ, 1,300 ರೂ. ನಗದು, 1 ಒಪ್ಪೋ ಮೊಬೈಲ್ ವಶಕ್ಕೆ ಪಡೆಯಲಾಗಿದೆ, ಆರ್.ಜಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಲಾಭಕ್ಕಾಗಿ ನಗರದ ವಿವಿಧೆಡೆ 8 ಲಕ್ಷ 23 ಸಾವಿರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ರೆಡ್ ಹ್ಯಾಂಡ್ ಸೆರೆ ಹಿಡಿಯಲಾಗಿದೆ. ಆತನಿಂದ 12,600 ಸ್ಟ್ರಿಪ್ಸ್ ಹೊಂದಿದ ಮಾತ್ರೆಗಳು, 240 ಬಾಟಲ್ ಸೇರಿದಂತೆ 105 ಗ್ರಾಂ. ಗಾಂಜಾ ಕೂಡ ವಶಕ್ಕೆ ಪಡೆಯಲಾಗಿದೆ ಎಂದರು.
ಖಾದ್ರಿ ಚೌಕ್ ಸಮೀಪದ ಇಕ್ಬಾಲ್ ಕಾಲೋನಿಯ ನಿವಾಸಿ ಮಹಮ್ಮದ್ ಮಸಿಯೊದ್ದಿನ್ ಮೈನುದ್ದೀನ್ (30) ಎಂಬಾತನೇ ಈ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯಾಗಿದ್ದಾನೆ. ಈತ ಮೊದಲು ಸಂಬಂಧಿಯೊಬ್ಬರ ಲೈಸನ್ಸ್ ಅಡಿಯಲ್ಲಿ ಮೆಡಿಕಲ್ ನಡೆಸುತ್ತಿದ್ದ, ಲಾಕ್ ಡೌನ್ ಬಳಿಕ ನಷ್ಟ ಅನುಭವಿಸಿದ್ದರಿಂದ ಮೆಡಿಕಲ್ ಬಂದ್ ಮಾಡಿ ಹೆಚ್ಚಿನ ದರದಲ್ಲಿ ಡ್ರಗ್ಸ್ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ. ಈತ ಮಾರಾಟ ಮಾಡುವ ಮಾದಕ ವಸ್ತುಗಳು ಬಿಹಾರ ರಾಜ್ಯದಿಂದ ಆಮದು ಮಾಡಿಕೊಳ್ಳುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.
ಮಾದಕ ವಸ್ತುಗಳ ವಿರುದ್ಧ ನಗರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಇಳಿದಿದ್ದು, 9 ದಿನಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ತೊಡಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದರು.
ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ, ವಾಹನ ಸವಾರರು ನಿಯಮ ಪಾಲಿಸಿ, ಇತರರಿಗೂ ಸಹಕರಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ, ಈಗಾಗಲೇ ಅಪ್ರಾಪ್ತರು ಚಲಾಯಿಸಿದ 30 ಬೈಕ್ ಗಳನ್ನು ಸೀಜ್ ಮಾಡಲಾಗಿದೆ.
_ ಡಾ.ಶರಣಪ್ಪ ಎಸ್.ಡಿ(ನಗರ ಪೊಲೀಸ್ ಆಯುಕ್ತ, ಕಲಬುರಗಿ)