ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರಕಾರದ ಆದ್ಯತೆ : ಎನ್.ಚಲುವರಾಯಸ್ವಾಮಿ

Update: 2024-09-18 13:54 GMT

ಬೆಂಗಳೂರು : ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ನೆರವಾಗಲಿವೆ. ಇದೇ ರೀತಿ ರೈತರಿಗೆ ಇನ್ನಷ್ಟು ವೈಜ್ಞಾನಿಕ ಹಾಗೂ ತಾಂತ್ರಿಕ ನೆರವು ನೀಡಲು ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಇಂಡಿಯನ್ ಸ್ಟಾರ್ಟಪ್ ಟೂರ್ 2024 ಅಂಗವಾಗಿ ದೇಶದ ವಿವಿಧೆಡೆಯಿಂದ ಆಗಮಿಸಿದ ಛಾತ್ರ ಸಂಸದ್ ನ ಯುವ ನವೋದ್ಯಮಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ ಅವರು, ಕೃಷಿ ಅಭ್ಯುದಯಕ್ಕೆ ಸರಕಾರ ಹತ್ತಾರು ಪ್ರಮುಖ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ ಎಂದರು.

ರಾಜ್ಯದಲ್ಲಿ ಬಹುತೇಕ ಮಳೆಯಾಶ್ರಿತ ಜಮೀನು ಹೊಂದಿದ್ದು, ಬರ ಹಾಗೂ ಅತೀವೃಷ್ಠಿ ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ ಅದನ್ನು ಸಮರ್ಥವಾಗಿ ನಿಭಾಯಿಸಲು ಸರಕಾರವೂ ಶ್ರಮಿಸುತ್ತಿದೆ ಎಂದ ಅವರು, ಕೃಷಿ ಯಾಂತ್ರೀಕರಣ, ಮೌಲ್ಯವರ್ಧನೆ, ಉತ್ಪಾದನೆ ಹೆಚ್ಚಳ ನಮ್ಮ ಆದ್ಯತೆ. ಮಾರುಕಟ್ಟೆ ಸರಪಣಿ ಬಲ ಪಡಿಸಲೂ ಸಹ ನಮ್ಮ ಸರಕಾರ ಗಮನ ಹರಿಸಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಛಾತ್ರ ಸಂಸದ್ ನ ಪ್ರತಿನಿಧಿಗಳ ಅಭಿಪ್ರಾಯ ಅಲಿಸಿದ ಸಚಿವರು, ಅವರ ಪ್ರಶ್ನೆಗಳಿಗೂ ಉತ್ತರ ನೀಡಿದರು. ದೇಶದಲ್ಲಿ ಕರ್ನಾಟಕ ತಂತ್ರಜ್ಞಾನ ಬಳಕೆಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಜಲಾನಯನ ಅಭಿವೃದ್ಧಿಯಲ್ಲಿಯೂ ವಿಶ್ವ ಬ್ಯಾಂಕ್ ನಮ್ಮ ರಾಜ್ಯವನ್ನು ಮುಂಚೂಣಿ ನಾಯಕನಂತೆ ಗುರುತಿಸಿದೆ ಎಂದರು.

ರಾಜ್ಯದಲ್ಲಿ ಬೆಳೆ ವಿಮೆ ನೊಂದಣಿ, ಪರಿಹಾರ ಇತ್ಯರ್ಥ, ಬೆಳೆ ಸಮೀಕ್ಷೆಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಸಮಗ್ರ ಕೃಷಿ ಹೆಚ್ಚು ಲಾಭದಾಯಕ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಿದೆ. ರೈತರು ಅದನ್ನು ಅನುಸರಿಸುವುದು ಉತ್ತಮ ಎಂದು ಕೃಷಿ ಸಚಿವರು ಅಭಿಪ್ರಾಯ ಪಟ್ಟರು.

ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಅಯುಕ್ತ ಮಹೇಶ್ ಶಿರೂರು, ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ಮತ್ತಿತರು ಹಾಜರಿದ್ದು, ನವೋದ್ಯಮಿಗಳಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News