ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ: ಸಚಿವ ಭೋಸರಾಜು ಸ್ಪಷ್ಟನೆ
ಎನ್.ಎಸ್.ಭೋಸರಾಜು
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಹೊಸದಿಲ್ಲಿ ಪ್ರವಾಸದ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಂಪುಟ ಪುನರ್ ರಚನೆ ಬಗೆಗಿನ ಚರ್ಚೆಗೆ ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಜೆಂಡಾದಲ್ಲೇ ಇಲ್ಲ. ಅವೆಲ್ಲಾ ಊಹಾಪೋಹಗಳು ಅಷ್ಟೇ ಎಂದರು.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸದ್ಯದ ಸ್ಥಿತಿಯಲ್ಲಿ ಇಲ್ಲ. ಸಚಿವ ಸಂಪುಟ ಪುನರ್ ರಚನೆ ಕೂಡಾ ಇಲ್ಲ. ಇದನ್ನು ಸಿಎಂ ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ ಎಂದು ಭೋಸರಾಜು ತಿಳಿಸಿದರು.
ನಾನು 55 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್‍ನಲ್ಲಿ ಎಲ್ಲ ಜವಾಬ್ದಾರಿ ಪಡೆದುಕೊಂಡು ಬಂದಿದ್ದೇನೆ. ಏನೇ ಬದಲಾವಣೆ ಆಗಬೇಕಾದರೆ ಸಮಯ ಬಂದಾಗ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿಎಂ ಅವರು ಹೊಸದಿಲ್ಲಿಯಲ್ಲಿ ರಾಜ್ಯದ ಬಗ್ಗೆ, ಪಕ್ಷದ ಬಗ್ಗೆ ಹೈಕಮಾಂಡ್ ಜೊತೆ ಮಾತಾಡಿದ್ದಾರೆ. ರಾಜ್ಯದ ಸ್ಥಿತಿ ಬಗ್ಗೆ ಅವರಿಗೆ ತಿಳಿಸಿರುತ್ತಾರೆ ಎಂದು ಸ್ಪಷ್ಟಪಡಿಸಿದರು.