ರಾಹುಲ್ ಗಾಂಧಿಯನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ : ಸಿಎಂ ಸಿದ್ದರಾಮಯ್ಯ

Update: 2024-09-18 12:40 GMT

ಸಿಎಂ ಸಿದ್ದರಾಮಯ್ಯ(PC:x/@siddaramaiah)

ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ. ಅವರನ್ನು ರಾಜಕೀಯವಾಗಿಯೂ ಮುಗಿಸುವ ಜೊತೆಗೆ ಪ್ರಾಣ ಭಯ ಹುಟ್ಟಿಸುವ ಬಿಜೆಪಿ ಷಡ್ಯಂತ್ರ ಆತಂಕಕಾರಿಯಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ತಕ್ಷಣ ಬಂಧಿಸಬೇಕು. ತ್ಯಾಗ ಬಲಿದಾನದ ಸಂಸ್ಕೃತಿ ಮತ್ತು ಹುತಾತ್ಮರ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಇಂತಹ ಬೆದರಿಕೆಗಳಿಗೆಲ್ಲ ಹೆದರುವವರಲ್ಲ ಎಂದು ತಿಳಿಸಿದರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಇಂತಹ ಉನ್ನತ ತ್ಯಾಗ ಬಲಿದಾನದ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಅಜ್ಜಿ ಇಂದಿರಾಗಾಂಧಿ ಅವರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ರಾಹುಲ್ ಗೆ ಬಿಜೆಪಿ ಬೆದರಿಕೆ ಹಾಕಿದೆ. ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ರಾಹುಲ್ ಗಾಂಧಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಈ ರೀತಿ ಜೀವ ಬೆದರಿಕೆಗಳ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ರಾಹುಲ್ ಗಾಂಧಿ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂ.ಬಹುಮಾನ ಕೊಡುವುದಾಗಿ ಶಿವಸೇನೆಯ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್‍ವಾಡ್, ರಾಹುಲ್ ಗಾಂಧಿ ನಾಲಗೆ ಕತ್ತರಿಸಲು ಕರೆ ನೀಡಿದ್ದಾರೆ. ಅಲ್ಲದೇ, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹೂತು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದೂ ಕೂಡ ಕೊಲೆ ಬೆದರಿಕೆಯೇ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಆದುದರಿಂದ, ಈ ಕೂಡಲೇ ಸಂಜಯ್ ಗಾಯಕ್ ವಾಡ್ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದ ಮುಖ್ಯಮಂತ್ರಿ, ಉತ್ತರ ಪ್ರದೇಶದ ಸಚಿವರೊಬ್ಬರು ರಾಹುಲ್ ಗಾಂಧಿ ಈ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇವತ್ತಿನವರೆಗೂ ಬಿಜೆಪಿ ಪಕ್ಷವಾಗಲಿ, ಬಿಜೆಪಿ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಕಾಟಾಚಾರಕ್ಕೆ ಕೇಸು ದಾಖಲಿಸಿ ಕೈ ಚೆಲ್ಲಿದ್ದಾರೆ ಎಂದು ಟೀಕಿಸಿದರು.

ನರೇಂದ್ರ ಮೋದಿ ಐದು ವರ್ಷ ಅಧಿಕಾರ ಪೂರೈಸಲ್ಲ: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಐದು ವರ್ಷ ಅಧಿಕಾರ ಪೂರೈಸಲ್ಲ. ದೇಶದಲ್ಲಿ ಆಗುತ್ತಿರುವ ರಾಜಕಾರಣದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋದಿ ಈ ಬಾರಿ ಪೂರ್ಣಾವಧಿ ಮುಗಿಸೋದು ಅನುಮಾನ. ಬಿಹಾರ ಸಿಎಂ ನಿತೀಶ್ ಕುಮಾರ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೆಚ್ಚು ದಿನ ಕೇಂದ್ರ ಸರಕಾರದ ಜೊತೆ ಇರುವುದಿಲ್ಲ ಎನ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮುನಿರತ್ನ ವಿರುದ್ಧ ಕಾನೂನು ಕ್ರಮ: ಅಸಹ್ಯವಾಗಿ ನಾಲಗೆ ಹರಿಬಿಟ್ಟು ಮಹಿಳಾ ಸಮುದಾಯವನ್ನು, ದಲಿತ ಜನಾಂಗವನ್ನು, ಒಕ್ಕಲಿಗ ಸಮುದಾಯವನ್ನು ಅತ್ಯಂತ ಕೆಟ್ಟದಾಗಿ ಅವಹೇಳನ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎನ್ನುವ ಬೇಡಿಕೆ ಇದೆ. ಸದ್ಯ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಅವರನ್ನು ಜೈಲಿಗೆ ಒಪ್ಪಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News