ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1ರಿಂದ 2 ಲಕ್ಷ ರೂ.ಗೆ ಏರಿಕೆ: ಸಚಿವ ಡಾ.ಮಹದೇವಪ್ಪ

Update: 2024-11-08 14:44 GMT

ಉಡುಪಿ: ಐಐಟಿ/ಐಐಎಂ/ಐಐಎಸ್‌ಸಿ/ಎನ್‌ಐಟಿಯಂಥ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು 1ಲಕ್ಷ ರೂ.ನಿಂದ 2ಲಕ್ಷ ರೂ.ಗೆ ಹೆಚ್ಚಳ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಇದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾಗಲಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಇನ್ನು ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕೂ ಅಧಿಕ ಅಂಕಗಳನ್ನು ಪಡೆದು, ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಸರಕಾರಿ ಕೋಟಾದಡಿ ಪ್ರವೇಶ ದೊರಕದೇ ಮ್ಯಾನೇಜ್‌ಮೆಂಟ್ ಕೋಟಾದಡಿ ಎಂ.ಬಿ.ಬಿ.ಎಸ್ ಕೋರ್ಸ್‌ಗೆ ಸೀಟು ಪಡೆದುಕೊಂಡ ಪರಿಶಿಷ್ಟ ಜಾತಿಯ ಮಕ್ಕಳಿಗೆ 25 ಲಕ್ಷ ರೂ. ಶುಲ್ಕ ಧನವನ್ನು ಒದಗಿಸಲು ಸರಕಾರ ತೀರ್ಮಾನಿಸಿದೆ ಎಂದವರು ಹೇಳಿದ್ದಾರೆ.

ಎಂಬಿಬಿಎಸ್ ಪದವಿ ಪಡೆಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೊದಲ ವರ್ಷ ಶೇ.60ಕ್ಕೂ ಅಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದರೆ ಅವರಿಗೆ ಮತ್ತೆ 25 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಶಿಕ್ಷಣವೇ ಸಮಾಜವನ್ನು ಬದಲಿಸುವ ಕೀಲಿಕೈ ಎಂಬ ಅಂಶವನ್ನು ಮನಗಂಡು ಈ ಒಂದು ಮಹತ್ವದ ಘೋಷಣೆಯನ್ನು ಸರಕಾರ ಮಾಡಿದ್ದು, ಇದರಿಂದ ಉನ್ನತ ಶಿಕ್ಷಣ ಪಡೆಯಬೇಕೆಂಬ ದಲಿತ ವಿದ್ಯಾರ್ಥಿಗಳ ಕನಸು ನನಸಾಗಲಿದೆ ಎಂದರು.

ಐಐಟಿ, ಐಐಎಂನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗ ಬೇಕು. ಈ ಮೂಲಕ ಸಮೃದ್ಧ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಸಚಿವರು ಹೇಳಿದರು.

ಬಡತನದ ಬೇಗೆಗೆ ಸಿಲುಕಿ ಎಂಬಿಬಿಎಸ್ ಓದುವ ಬಯಕೆ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರಿ ಕೋಟಾದಡಿ ಸೀಟು ಸಿಗದೇ ಅವರು ಖಾಸಗೀ ಸಂಸ್ಥೆಗಳಲ್ಲಿ ಓದುತ್ತಿದ್ದರೆ, ಅಂತಹ ಪ್ರತಿಭಾವಂತ ಮಕ್ಕಳ ಶುಲ್ಕವನ್ನು ಸರಕಾರ ಭರಿಸಲಿದ್ದು, ಇದಕ್ಕಾಗಿ ಆರಂಭಿಕವಾಗಿ 25 ಲಕ್ಷ ರೂ.ಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಈಗಾಗಲೇ ಪ್ರಬುದ್ಧ ಯೋಜನೆಯಡಿ ವಿದೇಶಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿರುವ ರಾಜ್ಯ ಸರಕಾರ, ಇದೀಗ ಮಕ್ಕಳ ಉತ್ತಮ ಶಿಕ್ಷಣವನ್ನು ಗಮನದಲ್ಲಿಟುಕೊಂಡು ಮುಖ್ಯ ಘೋಷಣೆಯನ್ನು ಮಾಡಿದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯದಂತೆ ನಮ್ಮೆಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿ, ಶ್ರಮ ಹಾಕಿ ಓದಬೇಕೆಂದು ಸಚಿವ ಡಾ.ಮಹಾದೇವಪ್ಪ ಆಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News