ಮಾನವನಿಗೆ ಮೂಲಭೂತ ಅಗತ್ಯತೆಗಳನ್ನು ಒದಗಿಸುವುದೇ ಸವಾಲು: ಯುಜಿಸಿ ಅಧ್ಯಕ್ಷ ಪ್ರೊ.ಜಗದೇಶ್

Update: 2024-11-08 15:50 GMT

ಮಣಿಪಾಲ, ನ.8: 2050ರ ವೇಳೆಗೆ ನಮ್ಮ ಜಾಗತಿಕ ಜನಸಂಖ್ಯೆ 10 ಬಿಲಿಯನ್‌ಗೆ (10ಶತಕೋಟಿ) ಏರಲಿದ್ದು, ಇಷ್ಟೊಂದು ಜನರಿಗೆ ಶುದ್ಧ ಇಂಧನ, ಸುರಕ್ಷಿತ ನೀರು, ಪೌಷ್ಠಿಕ ಆಹಾರ ಹಾಗೂ ಉತ್ತಮ ಆರೋಗ್ಯವನ್ನು ಒದಗಿಸುವುದು ಎಲ್ಲಾ ದೇಶಗಳಿಗೂ ಒಂದು ಸವಾಲು ಎನಿಸಲಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಪ್ರೊ. ಮಾಮಿದಾಳ ಜಗದೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಇಂದು ಪ್ರಾರಂಭಗೊಂಡ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ 32ನೇ ಘಟಿಕೋತ್ಸವದ ಮೊದಲ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡುತಿದ್ದರು.

ವಿಶ್ವದ ಅಗಾಧ ಜನಸಂಖ್ಯೆಗೆ ಒದಗಿಸಬೇಕಾದ ಮೂಲಭೂತ ಅಗತ್ಯತೆಯಿಂದ ನಮ್ಮ ಸಂಪನ್ಮೂಲಗಳ ಮೇಲೆ ಅಪಾರ ಒತ್ತಡ ಬೀಳುತ್ತಿದೆ. ಇದರಿಂದಾಗಿ ನವೀನ ಪರಿಹಾರಗಳ ತುರ್ತು ಅಗತ್ಯವನ್ನು ಇದು ಎತ್ತಿತೋರಿ ಸುತ್ತಿದೆ ಎಂದು ಪ್ರೊ.ಜಗದೇಶ್ ಕುಮಾರ್ ನುಡಿದರು.

ಉದಾಹರಣೆಗೆ ಹೇಳುವುದಾದರೆ ವಿಶ್ವದ ಒಟ್ಟು ಸಿಹಿನೀರಿನ ಪೂರೈಕೆಯಲ್ಲಿ ಭಾರತ ಕೇವಲ ಶೇ.4ರಷ್ಟನ್ನು ಮಾತ್ರ ಹೊಂದಿದೆ. ಇದರಲ್ಲಿ ಶೇ.80ರಷ್ಟು ಕೃಷಿಗೆ ಬಳಕೆಯಾಗುತ್ತಿದೆ. ಹೀಗಾಗಿ ಆಹಾರ ಮತ್ತು ನೀರಿನ ಬೇಡಿಕೆಯನ್ನು ಪೂರೈ ಸಲು ಪ್ರಮುಖ ಬೆಳೆಗಳ ನೀರಿನ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿ, ಅವುಗಳಿಗೆ ಸುಸ್ಥಿರ ಅನ್ಯ ಚಟುವಟಿಕೆ ಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ ಎಂದರು.

ನಮ್ಮ ಹೆಚ್ಚುತ್ತಿರುವ ಇಂಧನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಹೊಸ ಹೊಸ ಮಾರ್ಗಗಳನ್ನು ಅನ್ವೇಷಿಸ ಬೇಕಿದೆ. ನಮ್ಮ ವಿದ್ಯಾರ್ಥಿಗಳು ಇಂಥ ಸವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ, ಹೊಸ ಸಂಶೋಧನೆಗೆ ಒತ್ತು ನೀಡುವ ಬದ್ಧತೆಯನ್ನು ತೋರಿಸಬೇಕಿದೆ ಎಂದರು.

ಮೊದಲ ದಿನದ ಘಟಿಕೋತ್ಸವದಲ್ಲಿ ಎಂಕಾಂನ್‌ನಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿರುವ ಮಲಿನ್ ಮ್ಯಾಥ್ಯೂ ಹಾಗೂ ಎಂಎಸ್‌ಐಎಸ್‌ನಲ್ಲಿ ಎಂಇ ಓದು ತ್ತಿರುವ ಮನಸ್ವಿ ಪಿ.ಎಸ್. ಅವರು 2024ನೇ ಸಾಲಿನ ಪ್ರತಿಷ್ಠಿತ ಡಾ.ಟಿಎಂಎ ಪೈ ಚಿನ್ನದ ಪದಕವನ್ನು ಪಡೆದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಮಾಹೆ ಕುಲಪತಿ ಲೆ.ಜ.(ಡಾ.)ಎಂ.ಡಿ.ವೆಂಕಟೇಶ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಮಾಹೆಯ ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ನಾರಾಯಣ ಸಭಾಹಿತ್, ಡಾ.ಶರತ್ ಕೆ.ರಾವ್, ಡಾ.ದಿಲೀಪ್ ಜಿ.ನಾಯಕ್, ರಿಜಿಸ್ಟ್ರಾರ್ ಡಾ.ವಿನೋದ್ ವಿ.ಥಾಮಸ್ ಅವರು ಉಪಸ್ಥಿತರಿದ್ದರು.

ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ.ದಿಲೀಪ್ ಜಿ. ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ಮಣಿಪಾಲ ಎಂಐಟಿಯ ಸಹಾಯಕ ಪ್ರಾದ್ಯಾಪಕ ಡಾ.ಸುಹಾಸ್ ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು. ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ ವಂದಿಸಿದರು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News