ಉಡುಪಿ: 1182 ವಿದ್ಯಾರ್ಥಿಗಳಿಗೆ 1.15ಕೋಟಿ ರೂ. ವಿದ್ಯಾರ್ಥಿ ವೇತನ ವಿತರಣೆ

Update: 2024-09-29 16:59 GMT

ಉಡುಪಿ, ಸೆ.29: ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ವಿದ್ಯಾ ಪೋಷಕ್‌ನ 20ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭದಲ್ಲಿ ಜಿಲ್ಲೆಯ ಒಟ್ಟು 1182 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 1,15,36,000ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ರವಿವಾರ ವಿತರಿಸಲಾಯಿತು.

ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅವಕಾಶಗಳು ಸಹಜವಾಗಿ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳು ಲೌಕಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ವಿದ್ಯೆ ಯನ್ನು ಕಲಿತು ಜೀವನದಲ್ಲಿ ಯಶಸ್ಸು ಗಳಿಸಬೇಕು. ಪಡೆದ ಸಹಾಯವನ್ನು ದಾನದ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದರೆ ಜೀವನ ಸಾರ್ಥಕವಾಗುತ್ತದೆ. ನಮ್ಮ ಕರ್ತವ್ಯದಲ್ಲಿ ನಿಷ್ಠೆ ಇರಬೇಕು. ಇದರಿಂದ ಜೀವನ ಪರಿಪೂರ್ಣವಾಗುತ್ತದೆ ಎಂದರು.

ಪುತ್ತಿಗೆ ಕಿರಿಯ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ 10 ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ವಿತರಿಸಲಾಯಿತು. ಧಾರವಾಡದ ವಿದ್ಯಾಪೋಷಕ್ ಸ್ಥಾಪಕ ವಿಶ್ವಸ್ಥ ಪ್ರಮೋದ್ ಕುಲಕರ್ಣಿ, ಕೋಟದ ಗೀತಾನಂದ ಫೌಂಡೇಶನ್‌ನ ಆನಂದ ಸಿ.ಕುಂದರ್, ಮುಂಬಯಿ ಒಎನ್‌ಜಿಸಿ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್, ಉದ್ಯಮಿ ಹರೀಶ್ ರಾಯಸ್, ಬೀಜಾಡಿ ನಾಗರಾಜ ರಾವ್, ಸಾಯಿರಾಧ ಸಮೂಹ ಸಂಸ್ಥೆಗಳ ಮನೋಹರ ಎಸ್.ಶೆಟ್ಟಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಮಂಗಳೂರು ಪ್ರೇರಣಾ ಇನ್ಫೋಸಿಸ್‌ನ ರವಿರಾಜ್ ಬೆಳ್ಮ, ಮಲ್ಪೆಯ ಉದ್ಯಮಿ ಆನಂದ ಪಿ.ಸುವರ್ಣ, ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ. ರಂಜಿತ್ ಕುಮಾರ್ ಶೆಟ್ಟಿ, ಕಲಾರಂಗದ ಉಪಾಧ್ಯಕ್ಷರಾದ ಕಿಶನ್ ಹೆಗ್ಡೆ, ವಿಜಿ ಶೆಟ್ಟಿ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News