ಸೆ. 15 ರಂದು ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ

Update: 2024-09-12 10:01 GMT

ಕಾರ್ಕಳ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇದರ ಸಭಾಂಗಣದಲ್ಲಿ ಸೆಪ್ಟೆಂಬರ್ 15ರಂದು 2024ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಈ ಮೂರು ಜಿಲ್ಲೆಗಳ ಸಾಧಕ ಪ್ರಾಧ್ಯಾಪಕರುಗಳ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಮಾಜಿ ಸಿಂಡಿಕೇಟ್ ಸದಸ್ಯ ಮೋಹನ್ ಪಡಿವಾಲ್ ಅವರು ತಿಳಿಸಿದರು

ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು ಹೊಸದಿಲ್ಲಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ(NAAC)ಅಧ್ಯಕ್ಷರಾದ ಪ್ರೊ. ಅನಿಲ್ ಸಹಸ್ರಬುದ್ದೆ ಇವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು

2023 ನೇ ಸಾಲಿನಿಂದ ಆರಂಭವಾದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ಘಟಕವು ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಪ್ರಾಧ್ಯಾಪಕರನ್ನು ಗುರುತಿಸಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ. ಅಂತೆಯೇ ಈ ಬಾರಿ ಜೀವಮಾನದ ಸಾಧನೆಗಾಗಿ ಶಾರದ ಸಮೂಹ ಸಂಸ್ಥೆಗಳು ಮಂಗಳೂರು ಇದರ ಅಧ್ಯಕ್ಷ ಪ್ರೊ. ಎಂ ಬಿ ಪುರಾಣಿಕ್ ಹಾಗೂ ಖ್ಯಾತ ಬರಹಗಾರರ ಹಾಗೂ ಶಿಕ್ಷಣ ತಜ್ಞ ಶಂಕರ್ ರಾವ್ ಇವರನ್ನು ಆಯ್ಕೆ ಮಾಡಲಾಗಿದೆ.

ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಸಾಧನೆಗಾಗಿ ಅತ್ಯುತ್ತಮ ಆಡಳಿತ ನಿರ್ವಾಹಕರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ ಹಾಗೂ ಹಾಗೂ ಎಸ್ ಡಿ ಎಮ್ ಸ್ವಾಯತ್ತ ಕಾಲೇಜು ಉಜಿರೆ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಶೋಧನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಶಿಕ್ಷಕರನ್ನು ಗುರುತಿಸುವ ನಿಟ್ಟಿನಲ್ಲಿ ಈ ಬಾರಿ ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ ವಿಶಾಲಾಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಹಾಗೂ ಕಾವೇರಿ ಕಾಲೇಜು ವಿರಾಜಪೇಟೆ ನಿವೃತ್ತ ಪ್ರಾಂಶುಪಾಲ ಡಾ. ಆನಂದ ಕಾರ್ಲಾ ಇವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಗ್ರಂಥಪಾಲಕರು, ಬೆಸೆಂಟ್ ಸಂಧ್ಯಾ ಕಾಲೇಜು ಮಂಗಳೂರಿನ ಡಾ ವಾಸಪ್ಪ ಗೌಡ ಹಾಗೂ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿಗಾಗಿ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಕೆ. ಶಂಕರನಾರಾಯಣದ ದೈಹಿಕ ಶಿಕ್ಷಕರು ಇವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ. ರಘು ಅಕ್ಕಮಂಚಿ ಅವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ 2024ನೇ ಸಾಲಿನಲ್ಲಿ ಪಿ ಹೆಚ್ ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆ ಮಣಿಪಾಲ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಲ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ ಎಲ್ ಧರ್ಮ. ವಕೀಲರಾದ ಎಂ ಕೆ ಸುವೃತ್ ಕುಮಾರ್ ಹಾಗೂ ,ಶ್ರೀ ಭುವನೆಂದ್ರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿಎ ಶಿವಾನಂದ ಪೈ, ಕಾರ್ಯಕ್ರಮದಲ್ಲಿ ಕೆ ಆರ್ ಎಸ್ ಎಸ್ ಎಸ್ ಬೆಂಗಳೂರು ಅಧ್ಯಕ್ಷ ಡಾ. ಗುರುನಾಥ್ ಬಡಿಗೇರ್, ಪ್ರಧಾನ ಕಾರ್ಯದರ್ಶಿ ಪ್ರೊ. ರೋಹಿಣಿ ಕುಮಾರ್ ಹಿಲ್ಲಿ ಕಲಬುರ್ಗಿ, ಮುಂತಾದವರು ಉಪಸ್ಥಿತರಿರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಭುವನೇಂದ್ರ ಕಾಲೇಜ್ ಪ್ರಾಂಶುಪಾಲ ಡಾ ಮಂಜುನಾಥ್ ಕೋಟ್ಯಾನ್, ಪ್ರೊ ಸುರೇಂದ್ರ ಶೆಟ್ಟಿ ನಿಟ್ಟೆ, ಕೆ ಆರ್ ಎಂ ಎಸ್ ಎಸ್ ಜಂಟಿ ಕಾರ್ಯದರ್ಶಿ ಡಾ ಮಾಧವ ಮೂಡುಕೋಣಾಜೆ, ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ಮುಖ್ಯಸ್ಥೆ ವಾಣಿ ಯು ಎಸ್, ಕಾರ್ಯದರ್ಶಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News