ಯುವಜನತೆಗೆ ಬೇಕಿದೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-09-21 15:15 GMT

ಉಡುಪಿ, ಸೆ.21: ಯುವ ಜನತೆ ನಮ್ಮ ದೇಶದ ಸಂಪತ್ತು. ಯುವಜನತೆಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆತಾಗ ಅವರು ದೇಶದ ಆಸ್ತಿಯಾಗಿ ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ನಗರದ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಲಯನ್ಸ್ ಕ್ಲಬ್ ಅಮೃತ್ ಹಾಗೂ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯುಎಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪರಿಶ್ರಮ ಇಲ್ಲದೇ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವಿಲ್ಲ. ಶಿಕ್ಷಣದ ಜೊತೆಗೆ ಯುವಜನತೆ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ಅವರ ಜ್ಞಾನ ವಿಸ್ತಾರಗೊಳ್ಳುತ್ತದೆ. ಓದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯ ಜೊತೆಗೆ ಮಹಾತ್ಮರ ಕೃತಿಗಳನ್ನು ಓದುವ ಮೂಲಕ ಅವರ ಜೀವನ ಮೌಲ್ಯಗಳನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

ಯುವ ಜನತೆ ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೇ, ಶೈಕ್ಷಣಿಕ ಬೆಳವಣಿಗೆಯ ಕಡೆ ಗಮನಹರಿಸುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಲು ಈಗಿನಿಂದಲೇ ದೃಢ ನಿರ್ಧಾರ ಕೈಗೊಂಡು ಉತ್ತಮ ಭವಿಷ್ಯದತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿದಾಗ ನಮ್ಮ ದೇಶವನ್ನು ಹೊರತು ಪಡಿಸಿ ಉಳಿದೆಡೆ ಸಾಮಾಜಿಕ ಅಸ್ಥಿರತೆ ಇದ್ದು, ಇದರ ಪರಿಣಾಮ ಯುವಜನತೆ ಮೇಲಾಗುತ್ತದೆ.ನಮ್ಮ ದೇಶದಲ್ಲಿ ಬೇಧ, ಭಾವ, ಜಾತಿ ತಾರತಮ್ಯವಿಲ್ಲದೇ ಸಂವಿಧಾನದ ಆಶಯದಂತೆ ನಾವು ಭಾರತೀಯರು, ನಾವೆಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಯುವ ಜನೋತ್ಸವ ಕಾರ್ಯಕ್ರಮ ರಾಷ್ಟ್ರೀಯ ಏಕೀಕರಣದ ಪರಿಕಲ್ಪನೆ, ಕೋಮು ಸೌಹಾರ್ದತೆಯ ಮನೋಭಾವ, ಸಹೋದರತ್ವ, ಧೈರ್ಯ ಮತ್ತು ಸಾಹಸ ವನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇದನ್ನು ಯುವಜನರು ಸಮರ್ಪಕ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಾಂತಿಯ ಸಂಸ್ಕಾರವನ್ನು ಸಮಾಜದ ನಾಗರಿಕರಲ್ಲಿ ಬೆಳೆಸುವ ಉದ್ದೇಶ ದಿಂದ ಅಂತರ್‌ರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ. ನಾಗರಿಕರು ಸಂವಿಧಾನದಲ್ಲಿ ನೀಡಿರುವ ಹಕ್ಕಗಳನ್ನು ಕಾಪಾಡಿದ್ದಲ್ಲಿ ಹಾಗೂ ಕರ್ತವ್ಯಗಳನ್ನು ಪಾಲಿಸಿ ದ್ದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಯುವ ಜನರ ಹೊಸ ಆಯಾಮದ ಯೋಜನೆ, ಆವಿಷ್ಕಾರಗಳು, ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಹಾಡು, ಕಥೆ ಬರೆಯು ವುದು, ಕವಿತೆ ಬರೆಯುವುದು, ಚಿತ್ರಕಲೆ, ಭಿತ್ತಿ ಪತ್ರ ತಯಾರಿಕೆ ಹಾಗೂ ಘೋಷಣೆ ಸ್ಪರ್ಧೆಗಳು ನಡೆದವು.

ವೇದಿಕೆಯಲ್ಲಿ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಗಣನಾಥ್ ಎಕ್ಕಾರು, ರೆಡ್‌ಕ್ರಾಸ್ ರಾಜ್ಯ ಶಾಖೆ ಆಡಳಿತ ಮಂಡಳಿಯ ಸದಸ್ಯ ವಿ.ಜಿ ಶೆಟ್ಟಿ, ಲಯನ್ಸ್ ಅಮೃತ್ ಉಡುಪಿಯ ಭಾರತಿ ಹರೀಶ್, ಗೌರವ ಖಜಾಂಜಿ ರಮಾದೇವಿ, ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ಟಿ ಚಂದ್ರಶೇಖರ್, ಲಯನ್ಸ್ ಕ್ಲಬ್ ಅಮೃತ್‌ನ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News