ಕೊರಗ ಮಹಿಳೆಯರು ಆರ್ಥಿಕ ಸಬಲರಾಗಿ ಬದುಕು ಸದೃಢಗೊಳಿಸುವುದು ಅಗತ್ಯ: ಪ್ರತಿಭಾ ಆರ್.

Update: 2024-09-21 15:45 GMT

ಕಾಪು: ಕೊರಗ ಮಹಿಳೆಯರು ಉನ್ನತ ವಿದ್ಯಾಭ್ಯಾಸ ಮಾಡಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಿ ತಮ್ಮ ಬದು ಕನ್ನು ಸದೃಢಗೊಳಿಸಿ ಕೊಳ್ಳಬೇಕು. ಆತ್ಮವಿಶ್ವಾಸವೇ ಕೀಲಿ ಕೈ ಎಂದು ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಹೇಳಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಮತ್ತು ನಮ್ಮ ನ್ಯಾಯ ಕೂಟಗಳ ಸಹಯೋಗದೊಂದಿಗೆ ಶನಿವಾರ ಪೆರ್ನಾಲು ಆದಿವಾಸಿ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸ ಲಾದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೊರಗರು ಕೌಶಲ್ಯಯುಕ್ತ ಕಸುಬುಗಳ ತರಬೇತಿ ಪಡೆಯಬೇಕು. ತನ್ಮೂಲಕ ಆರ್ಥಿಕ ಸಬಲತೆ ಹೊಂದಬೇಕು. ಕೆಎಎಸ್, ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯಶೀಲರಾಗಬೇಕು. ಮಹಿಳೆಯರು ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳಬೇಕು. ಮುಖ್ಯ ವಾಹಿನಿಗೆ ಸೇರಲು ಆಧುನಿಕ ತಂತ್ರಜ್ಞಾನದ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಕೊರಗರಿಗೆ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಕೊರಗರು ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಸಕ್ರಿಯರಾಗಬೇಕು. ಕಾನೂನು ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಮಹಿಳಾ ಹಕ್ಕುಗಳು ಮತ್ತು ಸಾಂವಿಧಾನಿಕ ಅವಕಾಶಗಳು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಹಿಂದೂ ವಿವಾಹ ಕಾಯ್ದೆ ಇತ್ಯಾದಿ ವಿಷಯಗಳ ಕುರಿತು ಕಾರ್ಯಾಗಾರ ನಡೆಸ ಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಮಾತನಾಡಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವಿನಯ ಅಡ್ವೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ನಮ್ಮ ನ್ಯಾಯಕೂಟದ ಅಧ್ಯಕ್ಷ ಬಾಲರಾಜ್ ವಹಿಸಿದ್ದರು. ಶಶಿಕಲಾ ಮಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಮಲಾ ಕಳ್ತೂರ್ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ಮಣಿಪಾಲ್ ಸ್ವಾಗತಿಸಿದರು. ದಿವಾಕರ್ ಕಳ್ತೂರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News