ಅವಿಭಜಿತ ದ.ಕ. ಜಿಲ್ಲಾಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ

Update: 2024-10-05 15:10 GMT

ಕಾಪು : ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಇಂದು ಉಚ್ಚಿಲ ದೇವಳದಲ್ಲಿ ಆಯೋಜಿಸಲಾಗಿತ್ತು.

ಸ್ಪರ್ಧೆಯನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಗೌರವ ಸಲಹೆಗಾರ ಡಾ.ಜಿ.ಶಂಕರ್ ಮಾತನಾಡಿ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದ್ದು, ಪ್ರತಿವರ್ಷ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಅಭಿನಂದನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕಳೆದ ೩ ವರ್ಷಗಳಿಂದ ನಿರಂತರವಾಗಿ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಚಿತ್ರಕಲೆಯ ಮೂಲಕ ಬಾಲ್ಯದಿಂದಲೇ ಸನಾತನ ಧರ್ಮದ ಧಾರ್ಮಿಕ ಪ್ರಜ್ಞೆ, ಸೃಜನಶೀಲತೆ ಬೆಳೆಸಲು ಈ ಸ್ಪರ್ಧೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ೫೭೫ ಮಂದಿ ಭಾಗವಹಿಸಿದ್ದು, ತೀರ್ಪುಗಾರರಾಗಿ ಹಿರಿಯ ಕಲಾವಿದರಾದ ರಮೇಶ್ ಕಿದಿಯೂರು, ಶೇಖರ್ ಕಲಾಪ್ರತಿಭಾ, ಶ್ರೀಧರ್ ತೊಟ್ಟಂ ಸಹಕರಿಸಿದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷ ಬಬಿತಾ ಅರಸ್, ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ವ್ಯವಸ್ಥಾಪನಾ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕ ಕಿರಣ್ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿ ವಿಜೇತ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News