ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ

Update: 2024-11-13 15:43 GMT

ಬೈಂದೂರು : ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಪಶ್ಚಿಮಘಟ್ಟಕ್ಕೆ ಹೊಂದಿ ಕೊಂಡಿರುವ ಗ್ರಾಮಗಳಿಗೆ ಎದುರಾಗಬಹುದಾದ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ಸಂಬಂಧ ರಚಿಸಿರುವ ಬೈಂದೂರು ಫೌಂಡೇಶನ್ ವತಿಯಿಂದ ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ಮಂಗಳವಾರ ಕುಂದಾಪುರದಲ್ಲಿ ಸಮಾಲೋಚನ ಸಭೆ ನಡೆಯಿತು.

ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಸಮಸ್ಯೆ ನೀಡುತ್ತಿರುವ ಸಿಆರ್‌ಝೆಡ್, ಡೀಮ್ಡ್ ಫಾರೆಸ್ಟ್(ವನ್ಯಜೀವಿ), ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮುಂದಾಗಿರುವ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಹಿರಿಯ ವಕೀಲರು ಹಾಗೂ ಕಾನೂನು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶೀಘ್ರವೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರನ್ನು ಭೇಟಿ ಮಾಡಿ ಈ ವಿಷಯ ಕುರಿತು ಇನ್ನಷ್ಟು ಚರ್ಚೆ ಮಾಡುವ ಬಗ್ಗೆಯೂ ನಿರ್ಧರಿಸಲಾಯಿತು.

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸರಕಾರದ ಕೆಲವು ನೀತಿಗಳು ಜನ ಸಾಮಾನ್ಯರಿಗೆ ಮಾರಕವಾಗುವ ಸಾಧ್ಯತೆ ಇದ್ದು, ಅಂತಹ ಸಂದರ್ಭಗಳಲ್ಲಿ ಹೋರಾಟವನ್ನು ರೂಪಿಸಬೇಕಾಗುತ್ತದೆ. ಬೈಂದೂರು ಫೌಂಡೇಶನ್ ಮೂಲಕ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಕಾನೂನು ಹೋರಾಟಕ್ಕೆ ನಾವು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ದಾಖಲೆ, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹಿರಿಯ ವಕೀಲ ಟಿ.ಬಿ.ಶೆಟ್ಟಿ, ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆ ಸಹಿತ ಹಲವು ಅಂಶ ಗಳನ್ನು ವಿವರಿಸಿ, ಈ ಸಂಬಂಧ ಅಗತ್ಯ ದಾಖಲೆಗಳನ್ನು ಕಲೆಹಾಕುವುದರ ಬಗ್ಗೆ ತಿಳಿಸಿದರು. ಹಿರಿಯ ವಕೀಲ ಗುರು ಮೂರ್ತಿ, ವನ್ಯಜೀವಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗ್ಗೆ ಬೆಳಕು ಚಲ್ಲಿದರು.

ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ, ಸಿಆರ್‌ಝೆಡ್‌ನಿಂದ ಆಗುತ್ತಿರುವ ಸಮಸ್ಯೆ ಮತ್ತು ಹೇಗೆ ಪರಿಹಾರ ಕಂಡು ಕೊಳ್ಳಬಹುದು ಎಂಬುದರ ಬಗ್ಗೆ ವಿಶ್ಲೇಷಿಸಿದರು. ವಕೀಲ ರಮೇಶ್ ಹತ್ವಾರ್, ಗಣಿಗಾರಿಕೆ ಬಗ್ಗೆ ವಿವರ ನೀಡಿದರು. ವಕೀಲ ಸಾಜಿ ಅಬ್ರಾಹಂ, ಕೇರಳ ರಾಜ್ಯ ಕಸ್ತೂರಿ ರಂಗನ್ ವರದಿಯಿಂದ ಪಾರಾಗಿದ್ದು ಹೇಗೆ ಮತ್ತು ಕಾನೂನು ಹೋರಾಟ ಹೇಗಿತ್ತು ಎಂಬುದರ ಮಾಹಿತಿ ನೀಡಿದರು.

ಸಭೆಯಲ್ಲಿ ವಕೀಲರಾದ ರಾಘವೇಂದ್ರ, ಕೆ.ಬಿ.ಶೆಟ್ಟಿ, ಶರತ್ ಶೆಟ್ಟಿ, ಪ್ರವೀಶ್ ಚಂದ್ರ, ಪ್ರಶಾಂತ್ ಶೆಟ್ಟಿ, ರಜನಿಕಾಂತ್, ಫೌಂಡೇಷನ್ ಸಂಯೋಜಕ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ರವಿಚಂದ್ರ ಹಾಗೂ ಹಿರಿಯ ಕಿರಿಯ ವಕೀಲರು, ಕಾನೂನು ತಜ್ಞರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News