ಸಾಸ್ತಾನ ಟೋಲ್‌ನಲ್ಲಿ ಹೆಚ್ಚುವರಿ ಹಣ ವಸೂಲಿ ಆರೋಪ: ಉಡುಪಿ ಡಿಸಿಗೆ ದೂರು
ಉಡುಪಿ, ನ.16: ಸಾಸ್ತಾನ ಟೋಲ್ ಗೇಟ್‌ನಲ್ಲಿ ನಿಗಧಿತ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿ ರುವ ಬಗ್ಗೆ ಸೂಕ್ತ ಕ್ರಮ ಜರಗಿಸುವಂತೆ ದಸಂಸ ಮುಖಂಡ ವಾಸುದೇವ ಮುದೂರು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಸಾಸ್ತಾನ ಟೋಲ್ ಗೇಟ್‌ನಲ್ಲಿ ವಿಧಿಸುವ ನಿಗಧಿತ ಶುಲ್ಕಕ್ಕಿಂತ ಹೆಚ್ಚುವರಿ ಯಾಗಿ ಹಣ ವಸೂಲಿ ಮಾಡುತ್ತಿದ್ದು. ನನ್ನ ಕಾರಿನಲ್ಲಿರುವ ಖಾತೆಯಿಂದ ನಿರಂತರವಾಗಿ ಅಕ್ರಮ ಹಣ ವಸೂಲಿ ಮಾಡುತ್ತಿರುವುದು ನನ್ನ ಫಾಸ್ಟ್ ಟ್ಯಾಗ್ ಖಾತೆ ಪರಿಶೀಲಿಸಿದಾಗ ತಿಳಿದು ಬಂದಿದೆ. ಕಳೆದ ಅನೇಕ ತಿಂಗಳುಗಳಿಂದ ಕಾರು ಟೋಲ್ ಗೇಟ್‌ನ ಮೂಲಕ ಸಾಗುವಾಗ ವಿಧಿಸುವಂತಹ ನಿಗದಿತ ಶುಲ್ಕ 60 + 35 ಒಟ್ಟು 95ಕ್ಕಿಂತ ಮೂರು ಪಟ್ಟು ಹೆಚ್ಚುವರಿಯಾಗಿ ಹಣ ತೆಗೆದಿದ್ದಾರೆ.
ಆ ಬಗ್ಗೆ ಸಂಬಂಧಿಸಿದ ಟೋಲ್‌ಗೇಟ್ ವಿಚಾರಿಸಲಾಗಿ ಸ್ಪಷ್ಟ ಉತ್ತರವಿಲ್ಲದೇ ನಿಮ್ಮ ಹಣ ವಾಪಾಸು ರಿಫಂಡ್ ಆಗುತ್ತದೆ ಎಂದು ಹೇಳುವುದರ ಜೊತೆಗೆ ಸಿಬ್ಬಂದಿ ನಮ್ಮಲ್ಲಿ ಅನುಚಿತವಾಗಿ ವರ್ತಿಸಿ ಗಂಟೆ ಗಟ್ಟಲೆ ಕಾರು ತಡೆ ಹಿಡಿದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಇದೇ ರೀತಿ ಅನೇಕ ಬೇರೆ ವ್ಯಕ್ತಿಗಳಿಗೂ ಕೂಡಾ ಅಕ್ರಮವಾಗಿ ಹಣ ವಸೂಲಿ ಮಾಡಿ ತೊಂದರೆ ಆಗಿದೆ. ಇದೊಂದು ಅಕ್ರಮ ಟೋಲ್ ಮಾಫಿಯಾ ದಂಧೆಯಂತೆ ಕಂಡು ಬಂದಿದ್ದು, ಆದ್ದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.