ಮಕ್ಕಳ ಬಗ್ಗೆ ಹೆತ್ತವರು ಎಚ್ಚರಿಕೆಯಿಂದ ಇರಬೇಕು: ಡಾ.ವಿನ್ಸೆಂಟ್ ಆಳ್ವ
ಉದ್ಯಾವರ: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಶಿಕ್ಷಕರಿಗಿಂತ ಹೆಚ್ಚಾಗಿ ತಮ್ಮ ಹೆತ್ತವರ ಮೇಲೆ ಅವಲಂಬಿತರಾಗಿದ್ದು, ಅವರನ್ನು ಅನುಸರಿಸುತ್ತಾರೆ. ಹೀಗಾಗಿ ಹೆತ್ತವರ ನಡೆ ಮತ್ತು ನುಡಿಯಲ್ಲಿ ಸಮಾನತೆ ಇರಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಯ ಬದುಕಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಹೇಳಿದ್ದಾರೆ.
ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ‘ವರ್ಷದ ಹರ್ಷ- ನೂರರ್ವತ್ತನಾಲ್ಕು’ನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಬಾಲ್ಯದಲ್ಲಿ ಮುಗ್ಧರಾಗಿರುವ ಮಕ್ಕಳು, ಬೆಳೆಯುತ್ತಾ ಹೋದಂತೆ ಕೆಡುಕನ್ನು ತಮ್ಮಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಕೆಡುಕುಗಳು ಯಾವುದು ಎಂಬುದನ್ನು ಮಕ್ಕಳಿಗೆ ತಿಳಿಯಪಡಿಸುವ ಜವಾಬ್ದಾರಿ ಹೆತ್ತವರದ್ದಾಗಿದೆ. ಇದಕ್ಕೆ ಸತ್ಯ, ಸದ್ಗುಣಗಳೊಂದಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಪ್ರೀತಿ ಕಲಿಸುವ ಹೊಣೆಗಾರಿಕೆ ಹೆತ್ತವರದ್ದು ಎಂದವರು ನುಡಿದರು.
ಮುಖ್ಯ ಅತಿಥಿಯಾಗಿ ಕಾಪು ಉಳಿಯಾರಗೋಳಿ ದಂಡ ತೀರ್ಥ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಮರೀನಾ ಸರೋಜಾ ಸೋನ್ಸ್, ಕಿದಿಯೂರು ಶಾಮಿಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶೈಲಜಾ ಶುಭಾಶಂಸನೆಗೈದರು.
ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸುಜಾತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕರ್ಕೇರ, ಶಾಲಾ ವಿದ್ಯಾರ್ಥಿ ನಾಯಕ ರಿಶಾನ್ ಅಮೀನ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಸುರೇಶ್ ಶೆಣೈ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ರತಿ ಅವರು ವರದಿ ವಾಚಿಸಿದರು. ಶಿಕ್ಷಕಿ ಅನುರಾಧ ಶೆಟ್ಟಿ ವಂದಿಸಿ, ಶಿಕ್ಷಕ ವಿಕ್ರಮಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನೆ: ಬೆಳಗ್ಗೆ ನಿವೃತ್ತ ಹಿರಿಯ ಪತ್ರಕರ್ತ ಎಸ್.ನಿತ್ಯಾನಂದ ಪಡ್ರೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಜಾರುಗಿರಿ ಪಾಜಕ ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಡಾ.ಗೀತಾ ಶಶಿಧರ್, ಆದಿಉಡುಪಿ ಶಾಲಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಟಿ.ಕೆ.ಗಣೇಶರಾವ್ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಮತ್ತು ಹೆತ್ತವರಿಂದ ನೃತ್ಯ ವೈವಿಧ್ಯ ಮತ್ತು ಮಕ್ಕಳಿಂದ ‘ಹಕ್ಕಿಹಾಡು’( ರಚನೆ: ಕೋಟಿಗಾನಹಳ್ಳಿ ರಾಮಯ್ಯ, ನಿರ್ದೇಶನ:ರಾಜು ಮಣಿಪಾಲ) ಮಕ್ಕಳ ನಾಟಕ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ‘ಲವಕುಶ’ ಯಕ್ಷಗಾನ ಪ್ರದರ್ಶನಗೊಂಡಿತು.