"ನಮ್ಮ ಅಣ್ಣನಿಗೂ ಶರಣಾಗತಿಗೆ ಅವಕಾಶ ನೀಡಬೇಕಿತ್ತು; ಈಗ ಪರಿಹಾರವನ್ನಾದರೂ ನೀಡಲಿ"
ಹೆಬ್ರಿ, ಜ.8: ನಮ್ಮ ಅಣ್ಣ ವಿಕ್ರಮ ಗೌಡನಿಗೂ ಶರಣಾಗತಿಗೆ ಒಂದು ಅವಕಾಶವನ್ನು ನೀಡಬೇಕಾಗಿತ್ತು. ವಿಕ್ರಮ ಗೌಡನನ್ನು ಪೊಲೀಸರು ಎನ್‌ಕೌಂಟರ್ ಮಾಡಿರುವುದರಿಂದ ಇಂದು ಶರಣಾಗತರಾಗಿರುವ ನಕ್ಸಲರಿಗೂ ಸಿಗುವ ಪರಿಹಾರವನ್ನು ನಮಗೂ ನೀಡಬೇಕು ಎಂದು ಇತ್ತೀಚೆಗೆ ಮುದ್ರಾಡಿ ಸಮೀಪ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿರುವ ನಕ್ಸಲ್ ನಾಯಕ ವಿಕ್ರಮ ಗೌಡನ ಸಹೋದರ ಸುರೇಶ ಗೌಡ ಹಾಗೂ ಸಹೋದರಿ ಸುಗುಣ ಸರಕಾರವನ್ನು ಆಗ್ರಹಿಸಿದ್ದಾರೆ.
ವಿಕ್ರಮ ಗೌಡರೊಂದಿಗೆ ನಕ್ಸಲೈಟ್‌ಗಳಾಗಿದ್ದ ಆರು ಮಂದಿ ಸಹವಾಸಿಗಳು ಇದೀಗ ಸರಕಾರದ ಮುಂದೆ ಶರಣಾಗತಾಗಿರುವ ಹಿನ್ನೆಲೆಯಲ್ಲಿ ಮುದ್ರಾಡಿ ಹಾಗೂ ಕೂಡ್ಲುವಿನಲ್ಲಿ ಪ್ರತ್ಯೇಕವಾಗಿ ಪತ್ರಕರ್ತರೊಂದಿಗೆ ಮಾತನಾಡಿರುವ ಇವರು ಅಣ್ಣನ ಪರವಾಗಿ ಈ ಬೇಡಿಕೆಯನ್ನು ಸರಕಾರದ ಮುಂದಿಟ್ಟರು.
ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ವಾಸವಾಗಿರುವ ಸುರೇಶ್ ಗೌಡ ಮಾತನಾಡಿ, ನನ್ನ ಅಣ್ಣನಿಗೂ ಶರಣಾಗತಿಗೆ ಇದೇ ರೀತಿ ಒಂದು ಅವಕಾಶ ಕೊಡಬೇಕಿತ್ತು. ನಕ್ಸಲ್ ಶರಣಾಗತಿ ಒಳ್ಳೆಯ ವಿಚಾರವಾಗಿದ್ದು, ಅವರೆಲ್ಲ ಮುಂದೆ ಉತ್ತಮ ಜೀವನ ನಡೆಸಲಿ ಎಂದರು.
ನನ್ನ ಅಣ್ಣನಿಗಾದ ಪರಿಸ್ಥಿತಿ ಮುಂದೆ ಯಾರಿಗೂ ಆಗಬಾರದು ಎಂದು ಬೇಸರದಿಂದ ನುಡಿದ ಸುರೇಶ್ ಗೌಡ, ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರವನ್ನು ನಮಗೂ ನೀಡಲಿ ಎಂದರಲ್ಲದೇ, ಇದೀಗ ಶರಣಾಗತ ರಾಗಿರುವ ನಕ್ಸಲರ ಕುಟುಂಬ ಸ್ಥರು ಸಹ ನೋವು ಅನುಭವಿಸಬಾರದು. ಈ ಯೋಜನೆಯನ್ನು ಮೊದಲೇ ಘೋಷಣೆ ಮಾಡಿದ್ದಿದ್ದರೆ ನನ್ನ ಅಣ್ಣನೂ ಶರಣಾಗುತ್ತಿದ್ದ ಎಂದರು.
‘ಶರಣಾಗತಿಗೆ ಅವಕಾಶ ಸಿಕ್ಕಿದ್ದರೆ ಆತನೂ ನಮ್ಮೊಂದಿಗೆ ಒಳ್ಳೆಯ ಜೀವನ ನಡೆಸುತ್ತಿದ್ದ. ಸ್ವಲ್ಪ ದಿನ ಜೈಲು ವಾಸ ಅನುಭವಿಸಿ ಮುಂದೆಯಾದರೂ ಒಳ್ಳೆಯ ಜೀವನ ನಡೆಸೋ ಅವಕಾಶ ಇತ್ತು. ಈಗ ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರ, ವಸತಿ ಸೌಲಭ್ಯವನ್ನು ನಮಗೂ ನೀಡಿ. ನಾವು ಬಹಳ ಕಷ್ಟದಲ್ಲಿದ್ದೇವೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ’ ಎಂದು ಸುರೇಶ್ ವಿಷಣ್ಣ ಧ್ವನಿಯಲ್ಲಿ ನುಡಿದರು.
ನಮ್ಮನ್ನು ಇಲ್ಲಿಯವರೆಗೆ ಯಾವುದೇ ಸಮಿತಿ ಭೇಟಿ ಮಾಡಿಲ್ಲ.ಅಧಿಕಾರಿಗಳ ಕಿರುಕುಳದಿಂದ ಅಣ್ಣ ನಕ್ಸಲ್ ಹೋರಾಟಕ್ಕೆ ಇಳಿದಿದ್ದ. ಆಗ ಅಣ್ಣನಿಗೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿದ್ದರು. ಆತನ ಎನ್‌ಕೌಂಟರ್ ಬಗ್ಗೆಯೂ ತನಿಖೆಯಾಗಲಿ ಎಂದು ಮನವಿ ಮಾಡಿದ್ದಾರೆ.
ಸುಗುಣ ಬೇಡಿಕೆ: ಮತ್ತೊಂದೆಡೆ ಕೂಡ್ಲುವಿನ ಮೂಲ ಮನೆಯ ಸಮೀಪ ವಾಸವಾಗಿರುವ ವಿಕ್ರಮ ಗೌಡನ ಸಹೋದರಿ ಸುಗುಣ ಸುದ್ದಿಗಾರರೊಂದಿಗೆ ಮಾತನಾಡಿ ಇದೇ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಅಣ್ಣನೊಂದಿಗೆ ಇದ್ದ ನಕ್ಸಲರಿಗೆ ನೀಡಿದ ಶರಣಾಗತಿಯ ಅವಕಾಶವನ್ನು ಅಣ್ಣನಿಗೂ ನೀಡಬೇಕಾಗಿತ್ತು. ಈಗ ಶರಣಾಗತ ನಕ್ಸಲರಿಗೆ ನೀಡುವ ಪರಿಹಾರ ವನ್ನು ನಮಗೂ ನೀಡಿ ಎಂದು ಒತ್ತಾಯಿಸಿದರು.
ನಾವು ಬಹಳ ಕಷ್ಟದಲ್ಲಿದ್ದೇವೆ. ನಾವು ಬಾಡಿಗೆ ಮನೆಯಲ್ಲಿದ್ದೇವೆ. ನಮ್ಮ ಜಾಗವೆಲ್ಲ ಈಗಲೂ ಅಮ್ಮನ ಹೆಸರಿನಲ್ಲೇ ಇದೆ. ಅದಿನ್ನೂ ನಮ್ಮ ಹೆಸರಿಗೆ ಆಗಿಲ್ಲ. ಹೀಗಾಗಿ ಅಮ್ಮನ ಜಾಗದಲ್ಲಿ ಸ್ವಂತ ಮನೆ ಕಟ್ಟಲೂ ನಮ್ಮ ಬಳಿ ದುಡ್ಡಿಲ್ಲ. ನಾವೀಗ ಬಾಡಿಗೆ ಮನೆಯಲ್ಲಿದ್ದೇವೆ ಎಂದು ಸುಗುಣ ಹೇಳಿದರು.
ಅಮ್ಮ ತೀರಿಕೊಂಡು 8 ವರ್ಷಗಳಾಗಿವೆ. ಅಣ್ಣ (ವಿಕ್ರಮ ಗೌಡ) ಮನೆ ಬಿಟ್ಟು 22 ವರ್ಷಗಳಾಗಿವೆ. ಮೊದಲೆಲ್ಲಾ ಆತ ಒಳ್ಳೆಯವನಾಗಿಯೇ ಇದ್ದ. ಮನೆಯ ಎಲ್ಲಾ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದ. ಈಗ ಮನೆ, ಜಾಗ ಯಾವುದೂ ನಮ್ಮ ಹೆಸರಿನಲ್ಲಿಲ್ಲ. ಸಣ್ಣಣ್ಣನೂ (ಸುರೇಶ) ಪೊಲೀಸರಿಗೆ ಹೆದರಿಕೊಂಡು ಮನೆ ಬಿಟ್ಟ ಹೋಗಿದ್ದಾರೆ. ನಾನು ಮದುವೆಯಾಗಿ ಮುಂಬೈಯಲ್ಲಿದ್ದೆ. ಅಣ್ಣ ಹೋದ ಬಳಿಕ ಅಮ್ಮ ಒಬ್ಬರೇ ಮನೆಯಲ್ಲಿ ದ್ದರು. ಅಣ್ಣ ಮನೆ ಬಿಟ್ಟು ಹೋಗಿದ್ದು ಅಮ್ಮನಿಗೆ ಗೊತ್ತೇ ಇರಲಿಲ್ಲ’ ಎಂದು ಸುಗುಣ ವಿವರಿಸಿದರು.
ಅಣ್ಣ ಮನೆಬಿಟ್ಟು ಹೋದ ಬಳಿಕ ಸುಮಾರು ಒಂದು ವರ್ಷ ಅಮ್ಮ ಒಬ್ಬರೇ ಇದ್ದರು. ಹೀಗಾಗಿ ನಾನು ಊರಿಗೆ ಮರಳಿಬಂದೆ. ತಾಯಿ ಇದ್ದ ಮನೆಯನ್ನು ಮತ್ತೆ ಕಟ್ಟಲು ಪ್ರಯತ್ನಿಸುತಿದ್ದರೂ ಸಾಧ್ಯವಾಗುತ್ತಿಲ್ಲ. ಈಗ ಅಣ್ಣನ ಎನ್‌ಕೌಂಟರ್ ಆದ ಬಳಿಕ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲ. ಈಗ ಶರಣಾಗತರಾಗುವವರಿಗೆ ಪರಿಹಾರ ಎಲ್ಲಾ ಸೌಲಭ್ಯಗಳನ್ನು ಸರಕಾರ ನೀಡುತ್ತಿದೆ. ಜೀವಂತವಿದ್ದಿದ್ದರೆ ಅಣ್ಣನಿಗೂ ಅದು ಸಿಗುತ್ತಿತ್ತು ಆದರೆ ಈಗ ಎನ್‌ಕೌಂಟರ್ ಆಗಿ ಹೋಗಿದೆ ಎಂದರು.
ಸರಕಾರ ಈಗ ಪರಿಹಾರ ಏನಾದರೂ ನೀಡಿದರೆ ನಾವು ಜಾಗ, ಮನೆ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಬದುಕ ಬಹುದಿತು. ಅಣ್ಣ, ನಾನು ಮಕ್ಕಳೊಂದಿಗೆ ಬದುಕಬಹುದಿತ್ತು. ನಾನೀಗ ಮಗಳ ಮನೆಯಲ್ಲಿದ್ದೇನೆ. ನಮ್ಮ ಆರೋಗ್ಯವೂ ಸರಿಯಾಗಿಲ್ಲ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಬದುಕಿಗೆ ಮಗ-ಮಗಳ ದುಡಿಮೆಯನ್ನೇ ಅವಲಂಬಿಸಬೇಕಾಗಿದೆ ಎಂದರು.
ಪೊಲೀಸರು ಅಣ್ಣನ ಜೀವವನ್ನು ಹೇಗೂ ತೆಗೆದಿದ್ದಾರೆ. ಕೊನೆಗೆ ಕುಟುಂಬಕ್ಕೆ ಪರಿಹಾರವನ್ನಾದರೂ ನೀಡಲಿ ಎಂದು ಸುಗುಣ ಬೇಡಿಕೆಯಿಟ್ಟರು.
ಕಳೆದ ನವೆಂಬರ್ 18ರಂದು ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಮ ಗೌಡ ಗುಂಡೇಟಿಗೆ ಬಲಿಯಾಗಿದ್ದ ಎಂದು ಎಎನ್‌ಎಫ್ ಹಾಗೂ ಪೊಲೀಸರು ತಿಳಿಸಿದ್ದರು. ಆದರೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ವಿವಿಧ ತಂಡಗಳು ಇದೊಂದು ಫೇಕ್ ಎನ್‌ಕೌಂಟರ್ ಎಂದೇ ಪ್ರತಿಪಾದಿಸಿವೆ.