ಪಿಕ್‌ಅಪ್ ವಾಹನ ಢಿಕ್ಕಿ: ರಸ್ತೆ ಬದಿ ನಿಂತಿದ್ದ ಲಾರಿ ಚಾಲಕ ಮೃತ್ಯು
Update: 2025-01-13 16:35 GMT
ಕೋಟ, ಜ.13: ಪಿಕ್‌ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ಲಾರಿ ಚಾಲಕ ಮೃತಪಟ್ಟ ಘಟನೆ ತೆಕ್ಕಟ್ಟೆ ಶ್ರೀ ನ್ಯೂ ದುರ್ಗಾ ಪ್ರಸಾದ್ ಹೊಟೇಲ್ ಎದುರು ಜ.12ರಂದು ರಾತ್ರಿ 10ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಲಾರಿ ಚಾಲಕ ವೀರಣ್ಣ ಸಕ್ರಿ ಎಂದು ಗುರುತಿಸಲಾಗಿದೆ. ಇವರು ಲಾರಿಯನ್ನು ತೆಕ್ಕಟ್ಟೆಯ ಈಚರ್ ಶೋರೂಂ ನಿಂದ ಮಂಗಳೂರು ಕಡೆಗೆ ತೆಗೆದು ಕೊಂಡು ಹೋಗುತ್ತಿದ್ದು, ದಾರಿ ಮಧ್ಯೆ ಊಟಕ್ಕಾಗಿ ಲಾರಿಯನ್ನು ನಿಲ್ಲಿಸಿ, ರಸ್ತೆ ಬದಿಯಲ್ಲಿ ನಿಂತಿದ್ದರು.
ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಪಿಕ್‌ಅಪ್ ವಾಹನ ರಸ್ತೆ ಬದಿ ನಿಂತಿದ್ದ ವೀರಣ್ಣ ಸಕ್ರಿ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.