ಉಡುಪಿ: ಬಾಲಕಿಯರ ಹಾಸ್ಟೆಲ್‌ಗಳಿಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ
ಉಡುಪಿ, ಆ.1: ಮುಖ್ಯಮಂತ್ರಿಯಾದ ಬಳಿಕ ಪ್ರಾಕೃತಿಕ ವಿಕೋಪದಿಂದ ಇತ್ತೀಚೆಗೆ ಜಿಲ್ಲೆಯಲ್ಲಾದ ಹಾನಿಯ ಮಾಹಿತಿಯೊಂದಿಗೆ ಜಿಲ್ಲೆಯ ಪ್ರಗತಿ ಪರಿಶೀಲನೆಗಾಗಿ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಹಾದಿಯಲ್ಲಿ ದಿಢೀರನೆ ಬನ್ನಂಜೆಯಲ್ಲಿರುವ ಎರಡು ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿಗಳ ಪರಿಶೀಲನೆ ನಡೆಸಿದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹಿತವಾಗಿ ಬನ್ನಂಜೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಹಾಗೂ ಪಕ್ಕದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯಗಳಿಗೆ ಅವರು ಭೇಟಿ ನೀಡಿದರು.
ಅಪರಾಹ್ನದ ಭೋಜನದ ಸಮಯವಾದ ಕಾರಣ ಸಾಕಷ್ಟು ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದರು. ಹೆಚ್ಚಿನವರು ಸಮವಸ್ತ್ರದಲ್ಲಿದ್ದರು. ಸಿಎಂ ಸಿದ್ದರಾಮಯ್ಯ ವಿದ್ಯಾರ್ಥಿನಿಯರ ಕುಂದುಕೊರತೆ ಆಲಿಸಿದರು. ಸಿಗುವ ಊಟ ಉಪಹಾರದ ಗುಣಮಟ್ಟ, ನೀರು, ಸ್ವಚ್ಛತೆ, ಇತರ ಸೌಲಭ್ಯಗಳು ಸಮರ್ಪಕವಾಗಿವೆಯೇ ಎಂದು ಅವರನ್ನು ಪ್ರಶ್ನಿಸಿ ಸಕಾರಾತ್ಮಕ ಉತ್ತರ ಪಡೆದರು.
ಹಾಸ್ಟೆಲ್‌ನಲ್ಲಿದ್ದ ಪದವಿ ಕಾಲೇಜು ವಿದ್ಯಾರ್ಥಿನಿಯರು ಟ್ಯಾಬ್, ಲ್ಯಾಪ್ ಟಾಪ್ ಬೇಡಿಕೆ ಮುಂದಿಟ್ಟಾಗ ಲ್ಯಾಪ್ ಟಾಪ್ ಬೇಕಾ? ಕೊಡಿಸೋಣ ಬಿಡಿ ಎಂದು ನಗುತ್ತಾ ಮುಂದೆ ಸಾಗಿದರು.
ಮಕ್ಕಳ ಊಟ, ನೀರು, ಬಟ್ಟೆ, ಬೆಡ್, ತರಕಾರಿಗೆ ಸಂಬಂಧಿಸಿ ಸಮಸ್ಯೆ ಬಗ್ಗೆ ಪ್ರಶ್ನಿಸಿದರು. ಯಾವುದೇ ಸಮಸ್ಯೆಯಿಲ್ಲ, ಇಲ್ಲಿ ಎಲ್ಲ ಚೆನ್ನಾಗಿದೆ ಎಂದು ವಿದ್ಯಾರ್ಥಿನಿಯರು ಹೇಳಿದಾಗ ಹೌದಾ ಸಂತೋಷ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
ಹಾಸ್ಟೆಲ್ ವಾರ್ಡನ್‌ಗೆ ಸ್ವಚ್ಛತೆಯ ಪಾಠ ಹೇಳಿದ ಸಿಎಂ, ವಿದ್ಯಾರ್ಥಿನಿಯರ ಕೊಠಡಿಗೆ ತೆರಳಿದರು. ಟೇಬಲ್, ಖಾಲಿ ಇದ್ದ ಬೆಡ್ ಮೇಲಿದ್ದ ಫಂಗಸ್ ನಿವಾರಣೆಗೆ ಸೂಕ್ತ ಕ್ರಮಕ್ಕೆ ಸಲಹೆ ನೀಡಿದರು.
ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರ ಅನಿರೀಕ್ಷಿತ ಭೇಟಿಗೆ ಹಾಸ್ಟೆಲ್‌ವಾಸಿಗಳು ಹರ್ಷ ವ್ಯಕ್ತಪಡಿಸಿದರು. ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯರಾದ ಚೈತ್ರಾ ಅಕ್ಷತಾ ಮತ್ತು ಸಂಧ್ಯಾ ಸಿಎಂ ಸಿದ್ದರಾಮಯ್ಯ ಅವರನ್ನು ಕಾಣುವ, ಮಾತನಾಡುವ ಅವಕಾಶಕ್ಕೆ ಸಿಕ್ಕಿದ್ದಕ್ಕೆ ಖುಷಿ ವ್ಯಕ್ಯಪಡಿಸಿದರು.
ಬಳಿಕ ಸಿಎಂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಕುಂದು ಕೊರತೆ ಆಲಿಸಿದರು. ಹಾಸ್ಟೆಲ್ ನಿವಾಸಿ ವಿದ್ಯಾರ್ಥಿನಿಯರೊಂದಿಗೆ ಮುಖ್ಯಮಂತ್ರಿಗಳು ಗ್ರೂಪ್ ಪೋಟೊಗೆ ಫೋಸು ನೀಡಿದರು.