ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ 2025-26ರಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ
ಭಟ್ಕಳ : ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) ಯೋಜನೆಯಡಿ 2025-26ನೇ ಸಾಲಿಗೆ ವಿವಿಧ ತೋಟಗಾರಿಕಾ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆ, ಭಟ್ಕಳ, ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿ ಪ್ರಸ್ತಾವನೆ ಆಧಾರಿತ ಮತ್ತು ಆಧಾರಿತವಲ್ಲದ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು.
ಕಾಳುಮೆಣಸು, ಕಂದುಬಾಳೆ, ಅಂಗಾಶ ಬಾಳೆ, ಅನಾನಸ್, ಮಾವು, ಡ್ರಾಗನ್ ಫ್ರೂಟ್, ರಾಂಬೂಟನ್, ಹಲಸು, ಹೈಬ್ರಿಡ್ ತರಕಾರಿ, ಬಿಡಿ ಹೂವು, ಮತ್ತು ಗೇರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳಿಗೆ ರೈತರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ, ಪ್ಲಾಸ್ಟಿಕ್ ಹೊದಿಕೆ, ಕಾಳುಮೆಣಸು, ಗೇರು, ಮಾವು ಬೆಳೆಗಳ ಪುನಶ್ಚೇತನ ಕಾರ್ಯಕ್ರಮಗಳು, ಮತ್ತು ಜೇನು ಪೆಟ್ಟಿಗೆ ಯೋಜನೆಗೆ ಸಹ ಆರ್ಥಿಕ ನೆರವು ಲಭ್ಯವಿದೆ.
ಅಣಬೆ ಉತ್ಪಾದನಾ ಘಟಕ, ಸಂರಕ್ಷಿತ ಬೇಸಾಯ (ಪಾಲಿಹೌಸ್), ಪ್ಯಾಕ್ ಹೌಸ್ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ, ನೀರು ಸಂಗ್ರಹಣಾ ಘಟಕ ನಿರ್ಮಾಣ, ಮತ್ತು 20 ಎಚ್‌ಪಿ ಟ್ರ್ಯಾಕ್ಟರ್ ಖರೀದಿಗೆ ಆಸಕ್ತ ರೈತರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಇತರ ಯೋಜನೆಗಳಡಿ ಸೌಲಭ್ಯಗಳಾದ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ ನೀರು ಸಂಗ್ರಹಣಾ ಘಟಕಕ್ಕೆ ಸಹಾಯಧನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಹನಿ ನೀರಾವರಿ ಘಟಕಕ್ಕೆ ಆರ್ಥಿಕ ನೆರವು, ಯಾಂತ್ರಿಕರಣ ಯೋಜನೆಯಡಿಯಲ್ಲಿ ಅಲ್ಯೂಮಿನಿಯಮ್ ಏಣಿ, ವೀಡ್ ಕಟರ್, ಹುಲ್ಲು ಕತ್ತರಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಕಾಳುಮೆಣಸು ಬಿಡಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಸಿಂಪಡಣಾ ಯಂತ್ರ ಸೇರಿದಂತೆ ವಿವಿಧ ಕೃಷಿ ಉಪಕರಣಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಸಹಾಯಧನವನ್ನು ಜೇಷ್ಠತೆ, ಅನುದಾನದ ಲಭ್ಯತೆ, ಮತ್ತು ತೋಟಗಾರಿಕೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಫಲಾನುಭವಿಗಳಿಗೆ ಒದಗಿಸಲಾಗುವುದು. ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಭಟ್ಕಳ ಕಚೇರಿಯನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು ಇಲಾಖೆಯ ನಿಯಮಾವಳಿಗಳಿಗೆ ಒಳಪಟ್ಟು ಸಲ್ಲಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.