ಭಟ್ಕಳ: ಎ.18ರಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತ ಪ್ರತಿಭಟನೆ

ಭಟ್ಕಳ : ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎ.18 ರಂದು ಶುಕ್ರವಾರ ಭಟ್ಕಳದ ಸಮಸ್ತ ಮುಸ್ಲಿಮರ ಪರವಾಗಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಭಟ್ಕಳ ಶುಕ್ರವಾರದ ಪ್ರಾರ್ಥನೆಯ ಬಳಿಕ ತಾಲೂಕು ಆಡಳಿತ ಸೌಧದ ಬಳಿ ಸೇರಬೇಕೆಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಕರೆ ನೀಡಿದ್ದಾರೆ.
ನಮ್ಮ ಈ ಹೋರಾಟ ಯಾವುದೇ ಜಾತಿ, ಧರ್ಮ, ಸಮುದಾಯ, ಅಥವಾ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಕೇವಲ ಒಂದು ಕಾನೂನಿನ ವಿರುದ್ಧದ ಹೋರಾಟ. ನಾವು ಭಾರತದ ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ಈ ದೇಶದ ಶಾಂತಿ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಇನಾಯತುಲ್ಲಾ ಶಾಬಂದ್ರಿ ತಿಳಿಸಿದ್ದಾರೆ.
ಪ್ರಧಾನ ಕಾಯದರ್ಶಿ ಎಂ.ಜೆ. ಅಬ್ದುಲ್ ರಖೀಬ್ ಮಾತನಾಡಿ, ಈ ಕಾನೂನು ಮುಸ್ಲಿಂ ಸಮುದಾಯದ ಧಾರ್ಮಿಕ ಆಸ್ತಿಗಳನ್ನು, ಅಂದರೆ ಮಸೀದಿ, ಮದರಸಾ, ಖಬರಸ್ತಾನ್‌ಗಳನ್ನು ಕಾಪಾಡುವ ಬದಲು, ಅವುಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ನಮ್ಮ ಧಾರ್ಮಿಕ ಸ್ಥಳಗಳು ಅಪಾಯದಲ್ಲಿವೆ. ನಮ್ಮ ಹಲವು ಐತಿಹಾಸಿಕ ಮಸೀದಿಗಳನ್ನು ಪುರಾತತ್ವ ಇಲಾಖೆಯ ಅಡಿಯಲ್ಲಿ ತರಬಹುದು. ಇದರಿಂದ ಈ ಮಸೀದಿಗಳ ಮೇಲಿನ ನಮ್ಮ ಹಕ್ಕು ಕಳೆದುಕೊಳ್ಳಬಹುದು. ಈ ಕಾನೂನು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ.
ಸಂವಿಧಾನವು ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆಸ್ತಿ ಹಕ್ಕನ್ನು ಕೊಡುತ್ತದೆ. ಆದರೆ, ಈ ಕಾನೂನು ಮುಸ್ಲಿಂ ಸಮುದಾಯದ ಈ ಹಕ್ಕುಗಳನ್ನು ಕಸಿದುಕೊಳ್ಳುವಂತಿದೆ. ಈ ಕಾನೂನು ಕೇವಲ ಮುಸ್ಲಿಂ ಸಮುದಾಯದ ಆಸ್ತಿಗಳ ಮೇಲೆ ಕೇಂದ್ರೀಕರಿಸಿದೆ. ಇತರ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ಇಂತಹ ಕಟ್ಟುನಿಟ್ಟಿನ ನಿಯಮಗಳಿಲ್ಲ. ಇದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಶುಕ್ರವಾರ ನಡೆಯುವ ಪ್ರತಿಭಟನಾ ಸಭೆಗೆ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ನಾವು ಈ ದೇಶದ ನಾಗರಿಕರಾಗಿ, ಸಂವಿಧಾನದ ರಕ್ಷಣೆಗಾಗಿ, ನಮ್ಮ ಧಾರ್ಮಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದೇವೆ. ಈ ಕಾನೂನು ತೆಗೆದು ಹಾಕುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಭಟ್ಕಳದ ಎಲ್ಲರೂ ನಮ್ಮ ಜೊತೆ ಕೈಜೋಡಿಸಿ, ಒಗ್ಗಟ್ಟಿನಿಂದ ಈ ಹೋರಾಟವನ್ನು ಯಶಸ್ವಿಗೊಳಿಸೋಣ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೌಲಾನ ಯಾಸೀರ್ ಬರ್ಮಾವರ್ ನದ್ವಿ, ಇಕ್ಬಾಲ್ ಸಿಟಿ ಮೆಡಿಕಲ್ ಉಪಸ್ಥಿತರಿದ್ದರು.