ಈದ್ಗ್ ಗೆ ಮುನ್ನ ಅಗತ್ಯವಿರುವ ಕುಟುಂಬಗಳಿಗೆ 1.2 ಲಕ್ಷ ಕೆಜಿ ಅಕ್ಕಿ ವಿತರಿಸಿದ ಭಟ್ಕಳ ಸಮುದಾಯ

Update: 2025-04-18 22:35 IST
ಈದ್ಗ್ ಗೆ ಮುನ್ನ ಅಗತ್ಯವಿರುವ ಕುಟುಂಬಗಳಿಗೆ 1.2 ಲಕ್ಷ ಕೆಜಿ ಅಕ್ಕಿ ವಿತರಿಸಿದ ಭಟ್ಕಳ ಸಮುದಾಯ
  • whatsapp icon

ಭಟ್ಕಳ: ಈದ್-ಉಲ್-ಫಿತ್ರ್ ಗೂ ಮುನ್ನ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಭಟ್ಕಳ ಹಾಗೂ ಸುತ್ತಮುತ್ತಲಿನ ನಿವಾಸಿಗಳು 1.2 ಲಕ್ಷ ಕೆಜಿಗೂ ಹೆಚ್ಚು ಅಕ್ಕಿಯನ್ನು ವಿತರಿಸಿದರು.

ಕಳೆದ ನಾಲ್ಕು ದಶಕಗಳಿಂದ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿರುವ ಕೇಂದ್ರ ಫಿತ್ರ್ ಸಮಿತಿಯ ವಾರ್ಷಿಕ ಫಿತ್ರ್ ಉಪಕ್ರಮದ ಭಾಗವಾಗಿ ಈ ವಿತರಣಾ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.

2025ರಲ್ಲಿ ಈ ಅಭಿಯಾನವು ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಶಿರೂರು ಸೇರಿದಂತೆ ವಿವಿಧ ಪಟ್ಟಣಗಳು ಹಾಗೂ ಗ್ರಾಮಗಳ 1,859 ಕುಟುಂಬಗಳನ್ನು ಒಳಗೊಂಡಿದೆ. ಕೇಂದ್ರ ಫಿತ್ರ್ ಸಮಿತಿಯ ಸಂಚಾಲಕ ಮೌಲಾನಾ ಮುಹಮ್ಮದ್ ಇಲ್ಯಾಸ್ ಜಕಾತಿ ನದ್ವಿ ಪ್ರಕಾರ, ಈ ಪ್ರಕ್ರಿಯೆ ಯನ್ನು ದಕ್ಷವಾಗಿ ನಿರ್ವಹಿಸಲು 58 ವಿತರಣಾ ವಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ಕೆ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಭಟ್ಕಳ ಮೂಲದ ನಿವಾಸಿಗಳ ಕೊಡುಗೆಗಳೊಂದಿಗೆ ನೆರವು ಒದಗಿಸಲಾಗಿದ್ದು, ಅವರು ರಮಝಾನ್ ಸಂದರ್ಭದಲ್ಲಿ ನಿಯಮಿತವಾಗಿ ದೇಣಿಯನ್ನು ರವಾನಿಸುತ್ತಾ ಬರುತ್ತಿದ್ದಾರೆ.

ಬಹುತೇಕ ಕುಟುಂಬಗಳು ಸುಮಾರು 50 ಕೆಜಿ ಅಕ್ಕಿಯವರೆಗೆ ನೆರವು ಸ್ವೀಕರಿಸಿದ್ದರೆ, ದೊಡ್ಡ ಕುಟುಂಬ ಗಳು ಹಾಗೂ ಅಂಗವಿಕಲ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 100 ಕೆಜಿಯವರೆಗೆ ಅಕ್ಕಿಯನ್ನು ವಿತರಿಸಲಾಗಿದೆ. ನಾಲ್ಕನೆ ವರ್ಷದ ಈ ವಿತರಣಾ ಕಾರ್ಯಕ್ರಮವು ಪ್ರತಿ ಕುಟುಂಬಕ್ಕೆ ಐದು ಕೆಜಿ ಬಾಸ್ಮತಿ ಅಕ್ಕಿಯ ಹಂಚಿಕೆಯನ್ನೂ ಒಳಗೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯಕ್ರಮದಡಿ ಸೇರ್ಪಡೆಗೊಂಡಿರುವ ಗೇರುಸೊಪ್ಪ, ಹೆರಂಗಡಿ ಹಾಗೂ ಸರಲ್ಗಿಯಂತಹ ಗ್ರಾಮಗಳನ್ನು ಒಳಗೊಂಡಿರುವ ಶರಾವತಿ ಪ್ರಾಂತ್ಯಕ್ಕೂ ಈ ಅಭಿಯಾನ ತಲುಪಿದೆ.

ಈ ವಿತರಣಾ ಕಾರ್ಯಕ್ರಮಕ್ಕೆ ಸ್ಥಳೀಯ ಸ್ವಯಂಸೇವಕರು, ಯುವಕರ ಸಂಘಟನೆಗಳು ಹಾಗೂ ಧಾರ್ಮಿಕ ಸಂಘಟನೆಗಳು ನೆರವು ನೀಡಿದ್ದು, ಈ ಕಾರ್ಯಕ್ರಮವು ಅನಿವಾರ್ಯ ಅಗತ್ಯಗಳನ್ನು ಪೂರೈ ಸುವ ಹಾಗೂ ಸಾಮುದಾಯಿಕ ನೆರವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಈ ವಿತರಣಾ ಕಾರ್ಯಕ್ರಮದ ಬೆನ್ನಿಗೇ, ಕಾಸ್ಮೋಸ್ ಸ್ಪೋರ್ಟ್ಸ್ ಸೆಂಟರ್ ಆಯೋಜಿಸಿದ್ದ ಪರಾಮರ್ಶೆ ಸಭೆಯು ಮೊಹ್ಕಾಮ ಶರಯ್ಯ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ ಕೊಲ್ಲಿ ಮೂಲದ ಭಟ್ಕಳ ಜಮಾತ್ ಗಳು, ಸ್ಥಳೀಯ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ವಿದ್ವಾಂಸರು ಹಾಗೂ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ಚರ್ಚೆಯ ವೇಳೆ ಸರಕು ಸಾಗಣೆ ಸುಧಾರಣೆ, ವಿತರಣಾ ವ್ಯವಸ್ಥೆಯ ವಿಸ್ತರಣೆ ಹಾಗೂ ಭವಿಷ್ಯದ ಅಭಿಯಾನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದರ ಕುರಿತು ಗಮನ ಹರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News