ಭಟ್ಕಳ | ಅಂಜುಮಾನ್ ಕಾಲೇಜಿನಲ್ಲಿ RBI ಅಧಿಕಾರಿಗಳಿಂದ ಹಣಕಾಸು ಜಾಗೃತಿ ಕಾರ್ಯಕ್ರಮ

Update: 2024-09-04 14:43 GMT

ಭಟ್ಕಳ: ಅಂಜುಮಾನ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಣಕಾಸು ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅತಿಥಿ ಭಾಷಣಕಾರರಾಗಿ ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನ ಉಪ ಮಹಾ ವ್ಯವಸ್ಥಾಪಕ ವಿ.ಹರಿಪ್ರಸಾದ್ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಘಟಕ ಆಯೋಜಿಸಿತ್ತು ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಮುಹಮ್ಮದ್ ಗನಿಮ್ ಆತಿಥ್ಯ ವಹಿಸಿದ್ದರು. ಕಿರಾತ್ ಪಠಣದ ನಂತರ ಪ್ರಾಂಶುಪಾಲ ಪ್ರೊ. ಎಂ.ಕೆ.ಶೇಖ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಕಾರ್ಯಕ್ರಮದಲ್ಲಿ ಹಣಕಾಸು ಜಾಗೃತಿಗೆ ಸಂಬಂಧಿಸಿದ ಹಲವಾರು ಮುಖ್ಯ ವಿಷಯಗಳ ಕುರಿತು ಹರಿಪ್ರಸಾದ್ ಮಾತನಾ ಡಿದರು. ಹಣಕಾಸು ಸಾಕ್ಷರತೆಯನ್ನು ಸುಧಾರಿಸುವ ಗುರಿ ಹೊಂದಿರುವ ರಾಷ್ಟ್ರೀಯ ಹಣಕಾಸು ಒಳಗೊಳ್ಳುವಿಕೆ ಕಾರ್ಯ ತಂತ್ರ ಹಾಗೂ ರಾಷ್ಟ್ರೀಯ ಹಣಕಾಸು ಶಿಕ್ಷಣ ಕಾರ್ಯತಂತ್ರದ ಪ್ರಾಮುಖ್ಯತೆ ಕುರಿತು ಅವರು ಚರ್ಚಿಸಿದರು. ಗ್ರಾಮೀಣ ಯುವಕರು, ಸ್ವಯಂ ನೆರವು ಗುಂಪುಗಳು ಹಾಗೂ ರೈತರಂಥ ಸೇವಾಕೊರತೆಯನ್ನು ಅನುಭವಿಸುತ್ತಿರುವ ಜನರನ್ನು ತಲುಪಲು ಭಾರತೀಯ ರಿಸರ್ವ್ ಬ್ಯಾಂಕ್ ಮಾಡುತ್ತಿರುವ ಪ್ರಯತ್ನವನ್ನು ಅವರು ಒತ್ತಿ ಹೇಳಿದರು.

ಪ್ರಧಾನ ಮಂತ್ರಿ ಜನಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಯಂಥ ಸರಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಿದ ಹರಿಪ್ರಸಾದ್, ಅವುಗಳ ಲಾಭ ಮತ್ತು ಅವು ಸಾಮಾಜಿಕ ಭದ್ರತೆಗೆ ನೀಡುವ ಕೊಡುಗೆಯ ಕುರಿತು ವಿವರಿಸಿದರು.

ಸಂವಾದ ಅವಧಿಯನ್ನೂ ಒಳಗೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮತ್ತು ಕಾಲೇಜು ಸಿಬ್ಬಂದಿಗಳ ಹಲವಾರು ಪ್ರಶ್ನೆಥಗಳಿಗೆ ಉತ್ತರಿಸಿದ ಹರಿಪ್ರಸಾದ್, ಸಂಕೀರ್ಣ ಹಣಕಾಸು ವಿಷಯಗಳು ಅರ್ಥವಾಗುವಂತೆ ವಿವರಿಸಿದರು.

ಆರ್ಬಿಐನ 90 ವರ್ಷದ ಸಂಸ್ಥಾಪನಾ ದಿನಾಚರಣೆಗೆ ಸಾಕ್ಷಿಯಾದ ಈ ಕಾರ್ಯಕ್ರಮದಲ್ಲಿ ಹಣಕಾಸು ಸಾಕ್ಷರತೆಯನ್ನು ಮತ್ತಷ್ಟು ವಿಸ್ತರಿಸಲು 18-25 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಅಖಿಲ ಭಾರತ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂದು ಹರಿಪ್ರಸಾದ್ ಪ್ರಕಟಿಸಿದರು.

ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕ ಸತೀಶ್, ಭಟ್ಕಳದ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಜಾಝ್ ಅಲಂ ಹಾಗೂ ಹಣಕಾಸು ಸಾಕ್ಷರತೆ ಸಮಾಲೋಚಕಿ ಗೀತಾ ನಾಯಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ್ ಪ್ರಭು ಅವರ ವಂದಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News